Posted on 11-03-2025 |
Share: Facebook | X | Whatsapp | Instagram
ತೀರ್ಥಹಳ್ಳಿ ಮಾ 10 ಇತಿಹಾಸದ ಘಟನೆ ಮತ್ತು ವಿಷಯಗಳನ್ನು ವೈಜ್ಞಾನಿಕ ಹಾಗೂ ಮಾನವೀಯ ನೆಲೆಯಲ್ಲಿ ಅಭ್ಯಾಸ ಮಾಡಬೇಕು ಎಂದು ಇತಿಹಾಸ ವಿದ್ವಾಂಸರಾದ ಡಾ. ಕೆ.ಜಿ .ವೆಂಕಟೇಶ್ ಹೇಳಿದರು ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಿದ್ದರು.
ಇಂದು ಭಾವನೆಗಳಿಗೆ ಹೆಚ್ಚಿನ ಬೆಲೆಯನ್ನು ಕೊಟ್ಟು ಪ್ರತಿಯೊಬ್ಬರೂ ಕೂಡ ತಮ್ಮ ಜಾತಿ ತಮ್ಮ ಧರ್ಮ ತಮ್ಮ ಸಂಸ್ಕೃತಿ ಇತಿಹಾಸದಲ್ಲಿ ಇದೆ ಎಂದು ಹುಡುಕುವುದು ಹಾಗೂ ಯಾವುದಾದರು ಸಾಧಕ ತಮ್ಮ ಜಾತಿಯವನಾದರೆ ಅಥವಾ ತಮ್ಮ ಧರ್ಮದವನಾದರೆ ಆತನ ಬಗ್ಗೆ ಹೆಚ್ಚು ಪ್ರಚಾರವನ್ನು ನೀಡಿ ವಾಸ್ತವಿಕ ವಿಚಾರಗಳನ್ನು ದೂರ ತಳ್ಳುವುದು ನಡೆಯುತ್ತಿದೆ.
ವಿದ್ಯಾರ್ಥಿಗಳಿಗೆ ರಾಷ್ಟ್ರದ ರಾಜ್ಯದ ಪರ ರಾಜ್ಯದ ಕೆಲವು ಮಹಾನ್ ವ್ಯಕ್ತಿಗಳ ಪರಿಚಯ ಇರುತ್ತದೆ ಆದರೆ ತಮ್ಮ ಪಕ್ಕದಲ್ಲಿರುವ ಇತಿಹಾಸದ ಸಂಗತಿಗಳನ್ನು ಪಳೆಯುಳಿಕೆಗಳನ್ನು ನಿರ್ಲಕ್ಷ ಮಾಡುತ್ತಾರೆ. ಇಂದು ಆರು ವರ್ಷಗಳ ಕಾಲ ಮಾತ್ರ ಪಟ್ಟಾಭಿಷೇಕನಾಗಿ ರಾಜ್ಯಭಾರ ಮಾಡಿದ ಒಂದು ಯುದ್ಧವನ್ನು ಪೂರ್ಣವಾಗಿ ಗೆಲ್ಲದ ಮತ್ತು ಕರ್ನಾಟಕದ ಮೇಲೆ ಸತತವಾಗಿ ದಾಳಿ ಮಾಡಿದ ಶಿವಾಜಿ ನಮಗೆ ಚೆನ್ನಾಗಿ ಗೊತ್ತು. ಆದರೆ ಆತನನ್ನು ಸೋಲಿಸಿದ ಬೆಳವಾಡಿ ಮಲ್ಲಮ್ಮ ನಮಗೆ ತಿಳಿದಿಲ್ಲ, ಸಂಪೂರ್ಣ ದಕ್ಷಿಣ ಭಾರತವನ್ನು ಒಳಗೊಂಡ ವಿಜಯನಗರ ಮಹಾ ಸಾಮ್ರಾಜ್ಯವನ್ನು ಕಟ್ಟಿದ ಕರ್ನಾಟಕ ರಾಜ್ಯದ ರಮಾ ರಮಣನೆಂದು ಪ್ರಖ್ಯಾತನಾದ ಉತ್ತರ ಭಾರತ ಸಂಪೂರ್ಣವಾಗಿ ಅರಬ್ಬರ ಮೊಗಲರ ಆಳ್ವಿಕೆಗೆ ತುತ್ತಾದ ಸಂದರ್ಭದಲ್ಲಿ ಕೂಡ ದಕ್ಷಿಣ ಭಾರತಕ್ಕೆ ಯಾವುದೇ ಅನ್ಯ ರಾಜರು ಕಾಲಿಡದಂತೆ ನೋಡಿಕೊಂಡ
ಶ್ರೀ ಕೃಷ್ಣದೇವರಾಯನನ್ನು ನಾವು ಕಡೆಗಣಿಸಿದ್ದೇವೆ.
ಔರಂಗಜೇಬ ಸೆರೆಯಲ್ಲಿಟ್ಟ ಶಿವಾಜಿಯು ತಪ್ಪಿಸಿಕೊಂಡು ಬಂದ ಕಥೆಯನ್ನು ತಿಳಿದುಕೊಂಡಿದ್ದೇವೆ ಆದರೆ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ಕೊಟ್ಟು ಔರಂಗಜೇಬನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ ಮರಾಠ ರಾಜ್ಯದ ರಕ್ಷಣೆ ಮಾಡಿದ 25 ವರ್ಷಗಳ ಕಾಲ ಕರ್ನಾಟಕ ಮಾತ್ರವಲ್ಲದೆ ಕೇರಳದ ಬೇಕಲ್ ವರೆಗೆ ರಾಜ್ಯಭಾರ ಮಾಡಿದ ತೀರ್ಥಹಳ್ಳಿಯ ಕವಲೇ ದುರ್ಗದಲ್ಲಿ ಪಟ್ಟಾಭಿಷೇಕಗೊಂಡು ತಾನು ವಿಧವೆಯಾದರೂ ಅತ್ಯುತ್ತಮ ರಾಣಿಯಾಗಿ ಆಳ್ವಿಕೆ ಮಾಡಿ ಸತಿ ಸಹಗಮನ ಪದ್ಧತಿಯನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಲ್ಲಿಸಿದ ವೀರ ಮಹಿಳೆ ಕೆಳದಿ ಚೆನ್ನಮ್ಮ ನಮಗೆ ಗೊತ್ತಿಲ್ಲ, 54 ವರ್ಷಗಳ ಕಾಲ ಆಳಿದ ಚನ್ನಬೈರಾದೇವಿ, ಆಕೆಯನ್ನು ಸೋಲಿಸಿದ ದೊರೆ ವೆಂಕಟಪ್ಪ ನಾಯಕ, ವಿಜಯನಗರದ ಕೃಷ್ಣದೇವರಾಯನಿಗೆ ಅನೇಕ ಕೋಟೆಗಳನ್ನು ಗೆಲ್ಲಲು ಸಹಾಯ ಮಾಡಿದ ಸದಾಶಿವರಾಯ, ರಾಜ್ಯವನ್ನೇ ತೊರೆದು ಜಂಗಮ ವೇಷವನ್ನು ಧರಿಸಿ ಉತ್ತರ ಭಾರತಕ್ಕೆ ಹೋಗಿ ಅಕ್ಬರನ ಜಟ್ಟಿಯನ್ನು ಕುಸ್ತಿಯಲ್ಲಿ ಸೋಲಿಸಿ ಅಕ್ಬರ್ ನಿಂದ ಮೆಚ್ಚುಗೆಯನ್ನು ಪಡೆದು ಹಾಳು ಬಿದ್ದ ಕಾಶಿಯ ಶಿವಲಿಂಗವನ್ನು ನೇಪಾಳದವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಶಿವಾಲಯ ನಿರ್ಮಿಸಿದ ಕಾಶ್ಮೀರಕ್ಕೆ ಭೇಟಿ ನೀಡಿ ಶಂಕರಾಚಾರ್ಯರು ಸ್ಥಾಪಿಸಿದ ಲಿಂಗ ದರ್ಶನ ಮಾಡಿ ದೆಹಲಿಗೆ ಬಂದು ಐದು ಪ್ರತ್ಯೇಕವಾದ ದೇವಸ್ಥಾನವನ್ನು ಕಟ್ಟಿ ಅಕ್ಬರನ ಅನುಮತಿ ಪಡೆದು ಜಂಗಮವಾಡಿ ಮಠ ಕಟ್ಟಿದ ದೊಡ್ಡ ಸಂಕಣ್ಣ ನಾಯಕನನ್ನು ಮರೆತಿದ್ದೇವೆ. ಆತ ಕಟ್ಟಿಸಿದ
ಇಕ್ಕೇರಿಯ ಅಘೋರೇಶ್ವರ ದೇವಾಲಯ ಮರೆತಿದ್ದೇವೆ
ಉತ್ತರ ಭಾರತದಲ್ಲಿ ರಾಜ ತೋದರ ಮಲ್ಲ ಬಂದೋಬಸ್ತ್ ಎಂಬ ಕಂದಾಯ ಪದ್ಧತಿಯನ್ನು ಜಾರಿಗೆ ತಂದಿದ್ದರೆ ಅದಕ್ಕಿಂತ ಉತ್ತಮವಾದ ಶಿಸ್ತು ಎಂಬ ಕಂದಾಯ ಪದ್ಧತಿಯನ್ನು ಅಳವಡಿಸಿಕೊಂಡು ತಾನೇ ಅದರ ಪ್ರಯೋಗ ಮಾಡಿ ಸಂಪೂರ್ಣ ದಕ್ಷಿಣ ಭಾರತ ಈ ಕಂದಾಯ ಪದ್ಧತಿಯನ್ನೇ ಅನುಸರಿಸುವಂತೆ ಮಾಡಿದ ಶಿವಪ್ಪ ನಾಯಕನನ್ನು ನಾವು ಮರೆತಿದ್ದೇವೆ. ಕೆಳದಿ ಇಕ್ಕೇರಿ ಬಿದನೂರು ಕವಲೆದುರ್ಗ ಎಂಬ ನಾಲ್ಕು ರಾಜ್ಯವನ್ನು ಹೊಂದಿದ ಪ್ರಬಲವಾದ ಮಲೆನಾಡಿನ ಸಾಮ್ರಾಜ್ಯವನ್ನು ನಾವು ಕಡೆಗಣಿಸಿದ್ದೇವೆ.
ಇಂದು ಐತಿಹಾಸಿಕ ಸತ್ಯಕ್ಕಿಂತ ಜಾತಿ ಮತ್ತು ಧರ್ಮಪ್ರಬಲವಾಗಿದ್ದು ಸುಳ್ಳುಗಳೇ ಇತಿಹಾಸವನ್ನು ಆಳುತ್ತಿದೆ ಆದರೆ ಎಂದಿಗೂ ಕೂಡ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ದಿವಾಕರ್, ಇತಿಹಾಸ ಎಂದರೆ ಸತ್ಯವನ್ನು ಮಾತ್ರ ತಿಳಿಸುವ ಅಧ್ಯಯನ ಎಂದರು. ಕಾಲೇಜಿನ ನ್ಯಾಕ್ ಕೋ ಆರ್ಡಿನೇಟರ್ ಆದ ಡಾ.ಗಣಪತಿಯವರು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು ಇತರ ಎಲ್ಲಾ ಶಾಸ್ತ್ರಗಳಿಗಿಂತ ಇದು ಮುಖ್ಯವಾದ ಶಾಸ್ತ್ರ ಎಂದರು. ಸಮಾಜಶಾಸ್ತ್ರ ಉಪನ್ಯಾಸಕರಾದ ವಿಜೇಂದ್ರ ರವರು ಮಾತನಾಡಿ ಬಿದನೂರು ನಗರದಲ್ಲಿಯೇ ನಾನು ಓದಿದ್ದರು ಕೂಡ ನಮ್ಮೂರಿನ ಬಗ್ಗೆ ಇಷ್ಟು ವಿಷಯವನ್ನು ತಿಳಿದುಕೊಂಡಿಲ್ಲ ಈಗ ವಿಶೇಷವಾದ ಕುತೂಹಲ ಹುಟ್ಟಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸೌಜನ್ಯ ರವರು ಮಾತನಾಡಿ ಡಾ.ಕೆ .ಜಿ. ವೆಂಕಟೇಶ್ ಅವರು ಒಂದು ಗಂಟೆಗಳ ಕಾಲ ನಿರರ್ಗಳವಾಗಿ ಇತಿಹಾಸದಲ್ಲಿರುವ ಸತ್ಯವನ್ನು ತಿಳಿಸಿದ್ದಾರೆ. ನಮಗೂ ಕೂಡ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವಂತೆ ಮಾಡಿದ್ದಾರೆ. ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಇಂದು ಕೂಡ ಇತಿಹಾಸದ ಹೊಸ ಹೊಸ ವಿಷಯಗಳನ್ನು ಸಂಶೋಧನೆ ಮಾಡುತ್ತಿರುವುದು ಆಶ್ಚರ್ಯಕರ ವಿದ್ಯಾರ್ಥಿಗಳು ಕೂಡ ಇವರ ಹಾದಿಯಲ್ಲಿಯೇ ಅಭ್ಯಾಸ ಮಾಡಬೇಕು ಎಂದರು. ಕಾರ್ಯಕ್ರಮದ ಪ್ರಾರ್ಥನೆ ಸ್ವಾಗತ ಮತ್ತು ನಿರ್ವಹಣೆಯನ್ನು ಅಂತಿಮ ಬಿಎ ತರಗತಿಯ ವಿದ್ಯಾರ್ಥಿಗಳು ನಿರ್ವಹಿಸಿದರು.