Posted on 08-11-2025 |
Share: Facebook | X | Whatsapp | Instagram
ಶಿವಮೊಗ್ಗ,ನವೆಂಬರ್.8(ಕರ್ನಾಟಕ ವಾರ್ತೆ):
ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕ. ಭಗವಂತನನನ್ನು ಸಾಕ್ಷಾತ್ಕರಿಸಿಕೊಂಡವರು. ಭಕ್ತಿಯ ಮೂಲಕ ಸಮಾನತೆ ಸಾರಿದವರು ಎಂದು
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕನಕದಾಸರನ್ನು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುರುಬರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಯ ಸಾಕಾರಮೂರ್ತಿಯಾದ ಕನಕರು ಉಡುಪಿ ಶ್ರೀ ಕೃಷ್ಣರನ್ನು ಒಲಿಸಿಕೊಂಡ ಬಗೆಯನ್ನು ಸ್ಮರಿಸುವ ನಮ್ಮ ಸಮಾಜ, ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿದರೆ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ನಂಬಿದೆ.
೩೧೬ ಕೀರ್ತನೆಗಳನ್ನು ಸಂಗ್ರಹಿಸಿ ಪುಸ್ತಕ ಮಾಡಿ ತಲುಪಿಸುವ ಕೆಲಸ ಆಗಬೇಕು. ತಾವೂ ಸಹ ಈ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು ಮುಂದಿನ ವರ್ಷದ ಜಯಂತಿಯಲ್ಲಿ ಎಲ್ಲರಿಗೂ ಈ ಪುಸ್ತಕ ಸಿಗುವಂತಾಗಬೇಕೆಂದು ಮನವಿ ಮಾಡಿದರು.
ನಮ್ಮ ಸಂಸ್ಕೃತಿ ಮತ್ತು ದಾಸ ಪರಂಪರೆ ಮುಂದುವರಿಯಬೇಕು. ಆಗ ಮಾತ್ರ ನಮ್ಮ ದೇಶ ಸುಭಿಕ್ಷವಾಗಿರುತ್ತದೆ.
ಮನುಕುಲಕ್ಕೆ ಬೇಕಾದ ನೆಲೆಗಟ್ಟನ್ನು ಅವರು ಹಾಕಿಕೊಟ್ಟಿದ್ದು ಅದನ್ನುಉಳಿಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲ ಮಾಡಬೇಕೆಂದರು.
ಪುರುಂದರ ದಾಸರ ಹುಟ್ಟೂರು ನಮ್ಮಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಎಂದು ಇತ್ತೀಚೆಗೆ ತಿಳಿದು ಬಂದಿದ್ದು ಇಂತಹ ಶ್ರೇಷ್ಠ ವ್ಯಕ್ತಿಯನ್ನು ನೀಡಿರುವ ಜಿಲ್ಲೆ ನಮ್ಮದಾಗಿದೆ. ಇತ್ತೀಚೆಗೆ ಅಲ್ಲಿ ಪುರಂದರ ದಾಸರ ಕೀರ್ತನೋತ್ಸವ ನಡೆಯಿತು. ಅದೇ ರೀತಿಯಲ್ಲಿ ಕನಕದಾಸರ ಕೀರ್ತನೋತ್ಸವವನ್ನೂ ಶಿವಮೊಗ್ಗದಲ್ಲಿ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡೋಣ ಎಂದರು.
ಕನಕರು ಯಾವುದೇ ಜಾತಿಗೆ ಸೀಮಿತರಲ್ಲ.ಅವರು ಎಲ್ಲರಿಗೆ ಸೇರಿದವರು. ಕನಕ ಭವನ ಸರ್ವಸ್ಪರ್ಶಿಯಾಗಬೇಕು. ನನ್ನ ಸಹಕಾರ ಸಹ ಇದ್ದು ಎಲ್ಲರೂ ಕೈಜೋಡಿಸೋಣ ಎಂದರು. ಉಪ
ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಕೆ.ಎನ್.ರೇವಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನಕದಾಸ ಎಂದರೆ ಮಹಾನ್ ಕವಿ, ಸಂತ, ಕಲಿ, ಕೀರ್ತನಕಾರ, ಭಕ್ತ ಹಲವಾರು ಪ್ರತಿಭೆ ಒಳಗೊಂಡ ಮಹಾನ್ ಪುರುಷ.
ಕನಕ ಕೇವಲ ಕುರುಬ ಜಾತಿಗೆ ಸೀಮಿತ ಅಲ್ಲ. ಅವರು ಭಾರತವೆಂಬ ಪುಣ್ಯಭೂಮಿಗೆ ಸೇರಿದ ಅಂಬೇಡ್ಕರ್, ಬುದ್ದ, ಬಸವನಂತಹ ವ್ಯಕ್ತಿ. ಅವರು ಸಮಾಜದ ಓರೆಕೋರೆ, ಅಂಕುಡೊಂಕು, ತಾರತಮ್ಯಗಳನ್ನು ಕೇವಲ ತಮ್ಮ ಕೀರ್ತನೆಗಳು ಮಾತ್ರವಲ್ಲ ಭಕ್ತಿಯ ಮೂಲಕ ಹೋಗಲಾಡಿಸಲು ಹೋರಾಡಿದರು.
ಬಾಲ್ಯದಲ್ಲಿ ಕನಕರ ತಾಯಿ ಉತ್ತಮ ಶಿಕ್ಷಣ ಕೊಡಿಸಿ, ಧೈರ್ಯ, ಸ್ಥೈರ್ಯ ತುಂಬಿ ಧೈರ್ಯವಂತನನ್ನಾಗಿ ಮಾಡುತ್ತಾಳೆ. ತಾಳ್ಮೆ ಮತ್ತು ಜ್ಞಾನ ಅವರ ವಿಶೇಷ ಗುಣವಾಗಿದ್ದು, ಕಷ್ಟ ಕೊಟ್ಟವರಿಗೆ ತಮ್ಮ ಬುದ್ದಿ ಮತ್ತು ತಾಳ್ಮೆಯಿಂದಲೇ ಉತ್ತರಿಸಿದ್ದರು. ಸಮಾಜದಲ್ಲಿನ ಪಿಡುಗು, ಸಮಸ್ಯೆಗಳ ಕುರಿತು ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಪ್ರಯತ್ನವನ್ನು ಕನಕ ಮತ್ತು ದಾಸಕೂಟ ಮಾಡುತ್ತಿದೆ ಎಂದು ತಿಳಿಸಿದ ಅವರು ಕನಕರ ಶ್ರೀನಿವಾಸನ ಕುರಿತಾದ ಭಕ್ತಿಯ ಶಕ್ತಿ ಕುರಿತು ತಿಳಿಸಿದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನ, ಇತಿಹಾಸ, ವಿಚಾರಗಳು, ತತ್ವಗಳು, ಕೊಡುಗೆಗಳ ಕುರಿತು ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದ್ದು ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
೧೫ ನೇ ಶತಮಾನದಲ್ಲಿ ಕನಕದಾಸರು ಸಮಾಜದಲ್ಲಿದ್ದ ಮೇಲು ಕೀಳು, ಜಾತೀಯತೆಯನ್ನು ಹೋಗಲಾಡಿಸಿ, ಸಮಾನತೆ ತರಲು ಸಾಹಿತ್ಯ ಸಂಗೀತ, ಕೀರ್ತನೆಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಮೇಲುಕೀಳು, ಸಮಾನತೆ ತರಲು ಬಹಳಷ್ಟು ಮಹಾನ್ ವ್ಯಕ್ತಿಗಳು ಹೋರಾಡಿದ್ದು ಈ ಸಾಲಿಗೆ ಕನಕರೂ ಸಹ ಸೇರುತ್ತಾರೆ ಎಂದು ಸ್ಮರಿಸಿದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ. ಮಾತನಾಡಿ, ಕನಕರು ಸಮಾಜದಲ್ಲಿನ ಜಾತಿ- ಮತ ಗಳ ಬೇಧದ ಪಿಡುಗನ್ನು ದೂರ ಮಾಡಲು ಹಾಗೂ ಎಲ್ಲರೂ ಸಮಾನರು ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದು, ಇದು ಎಲ್ಲರಿಗೂ ತಿಳಿಯಬೇಕು. ಆದ್ದರಿಂದ ಇಂತಹ ಜಯಂತಿಗಳಲ್ಲಿ ಯುವಜನತೆ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಹಾಗೂ ಅವರ ಕೆಲವಾದರೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ ಮಾತನಾಡಿ ಇಂದಿನ ಕಾರ್ಪೊರೇಟ್ ಯುಗದಲ್ಲಿ ಮಕ್ಕಳು, ಯುವಜನತೆಗೆ ನಮ್ಮ ಸಮಾಜದ ಏಳ್ಗೆಗಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುತ್ತಿದ್ದು ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಿಳಿದುಕೊಂಡು, ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಪ್ರಸನ್ನಕುಮಾರ್ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗಬೇಕು.ಕನಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ರೂ. ೫೦ ಲಕ್ಷ ನೀಡಲು ಒಪ್ಪಿದ್ದು ಅಭಿನಂದನೆ ತಿಳಿಸುತ್ತೇನೆಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಶಿವಮೊಗ್ಗ ತಹಶೀಲ್ದಾರ್ ವಿ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.