ಕ್ರಾಂತಿಕಿಡಿ ವಿಶೇಷ : ಭಾರತದ 12 ಜ್ಯೋತಿರ್ಲಿಂಗಗಳು ಪುರಾಣ ಮತ್ತು ವಾಸ್ತವ
Religious
Religious
Posted on 25-02-2025 |
Share:
Facebook |
X |
Whatsapp
|
Instagram
ಕ್ರಾಂತಿಕಿಡಿ ವಿಶೇಷ
ಭಾರತದ 12 ಜ್ಯೋತಿರ್ಲಿಂಗಗಳು ಪುರಾಣ ಮತ್ತು ವಾಸ್ತವ
ಭಾರತ ದೇಶದಲ್ಲಿ ಹಿಂದುಗಳು ಪರಂಪರೆಯಿಂದ ನಂಬಿರುವ ದೇವಾನುದೇವತೆಗಳಲ್ಲಿ ಸ್ವಯಂಭು ಆದಿ ಯೋಗಿ ಎಂದು ಹೆಸರಾದ ತಂದೆ ತಾಯಿ ಯಾರು ಇಲ್ಲದ ಮಹಾದೇವನೇ ಮೊದಲ ದೇವರು . ಈ ಶಿವನು ಶಿವರಾತ್ರಿಯ ದಿನ ಸ್ವಯಂಭು ಆಗಿ ಜನಿಸಿದನೆಂದು ನಂಬಲಾಗಿದೆ. ಮುಂದೆ ಶಿವನ ಭಕ್ತಿ ಜಾಸ್ತಿಯಾಗಿ ಹಿಮಾಲಯದಿಂದ ಹಿಡಿದು ರಾಮೇಶ್ವರದವರೆಗೆ ಶಿವನ ದೇವಸ್ಥಾನಗಳನ್ನು ಹಿಂದಿನವರು ನಿರ್ಮಿಸಿದರು. ಈ ದೇವಸ್ಥಾನಗಳಲ್ಲಿ ಲಿಂಗ ಸ್ವರೂಪಿಯಾದ 12 ಜ್ಯೋತಿರ್ಲಿಂಗಗಳು ಹೆಚ್ಚು ಪ್ರಸಿದ್ಧವಾಗಿದೆ. ಅದರ ಬಗ್ಗೆ ಇರುವ ಪುರಾಣದ ವಿಷಯಗಳೆಂದರೆ,
1. ಮೊದಲನೆಯ ಲಿಂಗವೆಂದರೆ ಗುಜರಾತಿನ ಸೋಮನಾಥ ದೇವಾಲಯ. ಇದನ್ನು ಸ್ವತಹ ಚಂದ್ರದೇವನೇ ಸ್ಥಾಪಿಸಿದನೆಂದು ಪುರಾಣ ಕಥೆಯಿದೆ. ಚಂದ್ರನು ದಕ್ಷಬ್ರಹ್ಮನ 27 ಜನ ಹೆಣ್ಣು ಮಕ್ಕಳನ್ನು ಮದುವೆಯಾದನು. ಆಗ ದಕ್ಷಬ್ರಹ್ಮ ತನ್ನ ಎಲ್ಲಾ ಹೆಣ್ಣು ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ತಿಳಿಸಿದರು ಕೂಡ ಆತ ರೋಹಿಣಿಯನ್ನು ಮಾತ್ರ ಹೆಚ್ಚು ಪ್ರೀತಿಸಿ ಉಳಿದ 26 ಜನರನ್ನು ಕಡೆಗಣಿಸಿದನು ಅವರು ತಮ್ಮ ತಂದೆಯ ಬಳಿ ದೂರು ಕೊಟ್ಟಾಗ ಸಿಟ್ಟಿಗೆದ್ದ ದಕ್ಷಬ್ರಹ್ಮ ಚಂದ್ರನಿಗೆ ಕಾಂತಿ ಹೀನನಾಗುವಂತೆ ಶಾಪ ಕೊಟ್ಟನು. ಕಾಂತಿಹೀನನಾದ ಚಂದ್ರ ಶಿವನನ್ನು ಕುರಿತು ಉಗ್ರವಾದ ತಪಸ್ಸನ್ನು ಮಾಡಿದಾಗ ಶಿವ ಪ್ರತ್ಯಕ್ಷನಾಗಿ ಚಂದ್ರನ ಅರ್ಧಭಾಗ ಕಾಂತಿಯಾಗುವಂತೆ ಮಾಡಲು ಅರ್ಧ ಚಂದ್ರನನ್ನು ತಲೆಯಲ್ಲಿ ಬೆಳೆಸಿದನು ಅಂದಿನಿಂದ ಶಿವನಿಗೆ ಚಂದ್ರಶೇಖರ ಎಂಬ ಹೆಸರು ಬಂದಿತು ಚಂದ್ರ ಶಿವನನ್ನು ಕುರಿತು ತಪಸ್ಸು ಮಾಡಿ ಲಿಂಗ ಸ್ಥಾಪಿಸಿದ ಜಾಗವೇ ಸೋಮನಾಥೇಶ್ವರ.
2 ಎರಡನೆಯ ಲಿಂಗವೆಂದರೆ ಆಂಧ್ರ ಪ್ರದೇಶದ ಮಲ್ಲಿಕಾರ್ಜುನ ಇದು ಕೃಷ್ಣಾ ನದಿಯ ದಂಡೆಯ ಮೇಲಿದೆ. ಪಾರ್ವತಿಯ ಮಗನಾದ ಸುಬ್ರಹ್ಮಣ್ಯ ತಂದೆ ತಾಯಿಗಳ ಮೇಲೆ ಸಿಟ್ಟು ಮಾಡಿಕೊಂಡು ಇಲ್ಲಿನ ಪರ್ವತಗಳ ಮೇಲೆ ನೆಲೆಸಿದ್ದನು ಅಲ್ಲಿಗೆ ಬಂದ ಶಿವ ಮತ್ತು ಪಾರ್ವತಿಯರು ಲಿಂಗ ರೂಪದಲ್ಲಿ ಅಲ್ಲಿ ನೆಲೆ ನಿಂತು ಸುಬ್ರಹ್ಮಣ್ಯನ ಮನವೊಲಿಸಿದರು ಮಲ್ಲಿಕಾ ಅಂದರೆ ಪಾರ್ವತಿ ಅರ್ಜುನ ಎಂದರೆ ಶಿವ ಹಾಗಾಗಿ ಈ ಲಿಂಗಕ್ಕೆ ಮಲ್ಲಿಕಾರ್ಜುನ ಎಂದು ಹೆಸರು
3 ಮೂರನೆಯ ಲಿಂಗವೆಂದರೆ ಮಧ್ಯಪ್ರದೇಶದ ಮಹಾ ಕಾಲೇಶ್ವರ. ಇದು ಉಜ್ಜಯಿನಿಯಲ್ಲಿದೆ ಚಂದ್ರ ಸೇನಾ ಎಂಬ ಮಹಾರಾಜನು ಶಿವನನ್ನು ಭಕ್ತಿಯಿಂದ ಪೂಜಿಸಿದ್ದರಿಂದ ಶಿವನು ಸ್ವಯಂಭುಲಿಂಗವಾಗಿ ಹುಟ್ಟಿ ಚಂದ್ರ ಸೇನನ ಶತ್ರುಗಳನ್ನು ನಾಶ ಮಾಡಿ ಅಲ್ಲೇ ನೆಲೆಸಿದ
4 ನಾಲ್ಕನೆಯ ಲಿಂಗವೆಂದರೆ ಮಧ್ಯಪ್ರದೇಶದ ಓಂಕಾರೇಶ್ವರ ಇದು ಶಿವಪುರಿ ಎಂಬಲ್ಲಿ ಇದೆ ಇಲ್ಲಿ ಶಿವನು ಓಂಕಾರ ಮತ್ತು ಅಮರೇಶ್ವರ ಎಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ. ಈ ಬೆಟ್ಟ ದೂರದಿಂದ ನೋಡಿದಾಗ ಈ ಬೆಟ್ಟ ಓಂ ಆಕಾರದಲ್ಲಿ ಇರುವುದರಿಂದ ಅಮರೇಶ್ವರನಿಗೆ ಓಂಕಾರೇಶ್ವರ ಎಂಬ ಹೆಸರು ಬಂತು.
5 ಐದನೆಯ ಲಿಂಗವೆಂದರೆ ಮಹಾರಾಷ್ಟ್ರದ ಭೀಮ ಶಂಕರ ಇದು ಭೀಮಾನದಿಯ ತೀರದಲ್ಲಿದೆ. ಈ ಲಿಂಗವನ್ನು ಎಲ್ಲರೂ ಕೂಡ ಮುಟ್ಟಿ ಪೂಜಿಸಬಹುದು.
6 ಆರನೆಯ ಲಿಂಗವೆಂದರೆ ಉತ್ತರಖಂಡದ ಕೇದಾರನಾಥೇಶ್ವರ ಇದು ಮಂದಾಕಿನಿ ನದಿ ತೀರದಲ್ಲಿದ್ದು ಅತ್ಯಂತ ಪ್ರಸಿದ್ಧವಾದ ಕ್ಷೇತ್ರವಾಗಿದೆ 2013ರಲ್ಲಿ ಮಹಾಪ್ರಳಯ ಬಂದಾಗ ಈ ದೇವಸ್ಥಾನಕ್ಕೆ ದೊಡ್ಡನೆಯ ಬಂಡೆ ಒಂದು ಬಂದು ಅಡ್ಡನಿಂತು ನೀರಿನ ರಭಸದಿಂದ ದೇವಸ್ಥಾನ ಕೊಚ್ಚಿಕೊಂಡು ಹೋಗುವುದನ್ನು ತಡೆಯಿತು. ಇದರ ಸುತ್ತ ಮತ್ತೆ ನಾಲ್ಕು ಲಿಂಗವಿದ್ದು ಇದನ್ನ ಪಂಚಲಿಂಗೇಶ್ವರ ಎಂದು ಕೂಡ ಕರೆಯುತ್ತಾರೆ. ಪಾಂಡವರು ಕೂಡ ಈ ದೇವಸ್ಥಾನದಲ್ಲಿ ಪೂಜೆ ಮಾಡಿದ್ದರು ಎಂಬ ಪ್ರತೀತಿ ಇದೆ.
7 ಏಳನೆಯ ಲಿಂಗವೆಂದರೆ ಉತ್ತರ ಪ್ರದೇಶದ ಕಾಶಿಯಲ್ಲಿರುವ ವಿಶ್ವನಾಥ. ಕಾಶಿ ಅಥವಾ ವಾರಣಾಸಿ. ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದು ಇಲ್ಲಿರುವ ಲಿಂಗವನ್ನು ವಿಶ್ವಕ್ಕೆ ದೇವರಾದ ವಿಶ್ವನಾಥ ಎಂದು ಕರೆಯಲಾಗುತ್ತದೆ. ಪುರಾಣದ ಅನೇಕ ರಾಜರುಗಳಿಗೆ ಕಾಶಿ ಪಟ್ಟಣ ರಾಜಧಾನಿಯಾಗಿತ್ತು.
8 ಎಂಟನೆಯ ಲಿಂಗವೆಂದರೆ ಜಾರ್ಖಂಡ್ ನಲ್ಲಿರುವ ವೈದ್ಯನಾಥ ಇದನ್ನು ಸ್ವತಹ ವರುಣದೇವ ಸ್ಥಾಪಿಸಿದನೆಂಬ ನಂಬಿಕೆ ಇದೆ. ಗೋಕರ್ಣದ ಕಥೆಯಂತೆ ಇದು ಕೂಡ ಅದೇ ಕಥೆಯನ್ನು ಹೊಂದಿದೆ ರಾವಣನು ಆತ್ಮಲಿಂಗವನ್ನು ಕೊಂಡೊಯ್ಯುವಾಗ ವರುಣದೇವ ಚಿಕ್ಕ ವಟುವಿನ ವೇಷದಲ್ಲಿ ಬಂದು ಲಿಂಗವನ್ನು ಭೂಮಿಯಲ್ಲಿ ಇಟ್ಟನು ಎಂಬ ನಂಬಿಕೆ ಇದೆ. ಎಲ್ಲರ ಕಾಯಿಲೆಗಳನ್ನು ವಾಸಿ ಮಾಡುವ ದೇವರಾಗಿದ್ದರಿಂದ ಇದನ್ನು ವೈದ್ಯನಾಥ ಎಂದು ಕರೆಯುತ್ತಾರೆ.
9 ಒಂಬತ್ತನೇಯ ಲಿಂಗವೆಂದರೆ ಮಹಾರಾಷ್ಟ್ರದ ತ್ರಯಂಬಕೇಶ್ವರ ಇದು ಗೋದಾವರಿ ನದೀತೀರದ ಬ್ರಹ್ಮಗಿರಿ ಎಂಬ ಪರ್ವತದ ಮೇಲಿದೆ ಗೌತಮ ಋಷಿಯು ಈ ಲಿಂಗವನ್ನು ಸ್ಥಾಪಿಸಿದನು ಗೌತಮನ ಪಾಲನೆಯಲ್ಲಿದ್ದ ಹಸು ಒಂದು ತೀರಿಕೊಂಡಿದ್ದರಿಂದ ಅದರ ಪಾಪ ಪರಿಹಾರವಾಗಿ ಗೌತಮನು ಇಲ್ಲಿ ಲಿಂಗವನ್ನು ಸ್ಥಾಪಿಸಿ ಮೋಕ್ಷ ಪಡೆದನು ಎಂಬ ನಂಬಿಕೆ ಇದೆ.
10 ಹತ್ತನೇಯ ಲಿಂಗವೆಂದರೆ ಗುಜರಾತಿನ ನಾಗೇಶ್ವರ ಇದು ಗುಜರಾತಿನ ತಾರಕೇಶ್ವರ ಅರಣ್ಯದಲ್ಲಿ ಇದೆ. ಶಿವನು ತಾರಕ ರೂಪದಲ್ಲಿ ಬಂದು ಕುಂಭ ಕರ್ಣನ ಮಗ ತಾರಕೇಶ್ವರ ಎಂಬ ರಾಕ್ಷಸನನ್ನು ಕೊಂದು ಹಾಕಿದನು ಎಂಬ ಕತೆ ಇದೆ. ಇಲ್ಲಿನ ಲಿಂಗಕ್ಕೆ ನಾಗೇಶ್ವರ ಎಂದು ಪೂಜಿಸುತ್ತಾರೆ.
11 ಹನ್ನೊಂದನೇಯ ಲಿಂಗವೆಂದರೆ ತಮಿಳುನಾಡಿನ ರಾಮೇಶ್ವರ. ಈ ಲಿಂಗವು ರಾಮನಾಥಪುರಂ ಎಂಬಲ್ಲಿ ಇದ್ದು ರಾಮನು ರಾವಣನನ್ನು ಕೊಂದು ಇಲ್ಲಿಗೆ ಬಂದಾಗ ಲಿಂಗವನ್ನು ಪೂರಿಸಲು ಹನುಮಂತನಿಗೆ ಲಿಂಗ ತರಲು ಹೇಳಿದನು. ಹನುಮಂತ ಬರುವುದು ತಡವಾಗಿದ್ದರಿಂದ ಸೀತೆ ಮರಳಿನಿಂದ ಈ ಲಿಂಗವನ್ನು ಸ್ಥಾಪಿಸಿದಳು. ರಾಮನಿಗಾಗಿ ಈಶ್ವರನನ್ನು ಸ್ಥಾಪಿಸಿದ್ದರಿಂದ ಇದಕ್ಕೆ ರಾಮೇಶ್ವರ ಎಂದು ಹೆಸರು ಮುಂದೆ ರಾಮ ಸೀತೆ ಭಕ್ತಿಯಿಂದ ಈ ಲಿಂಗಕ್ಕೆ ಪೂಜೆ ಮಾಡಿದರು ಎಂಬ ಪ್ರತೀತಿ ಇದೆ.
12 ಹನ್ನೆರಡನೆಯ ಮತ್ತು ಕೊನೆಯ ಜ್ಯೋತಿರ್ಲಿಂಗವೆಂದರೆ ಮಹಾರಾಷ್ಟ್ರದ ಗ್ರೀಷ್ಮೇಶ್ವರ. ಇದು ದೌಲತಬಾದ್ ಜಿಲ್ಲೆಯಲ್ಲಿದೆ, ಇಲ್ಲಿ ಸುಧರ್ಮ ಮತ್ತು ಸುಧಾ ಎಂಬ ರಾಜ ದಂಪತಿಗಳು ವಾಸವಾಗಿದ್ದರು ಬಹುಕಾಲ ಮಕ್ಕಳಿಲ್ಲದೆ ಇದ್ದುದರಿಂದ ಸುಧಾ ತನ್ನ ತಂಗಿಯಾದ ಗ್ರೀಷ್ಮೆಯನ್ನು ಸುದರ್ಮನೆಗೆ ಕೊಟ್ಟು ಮದುವೆ ಮಾಡಿ ಒಂದು ಮಗುವನ್ನು ಪಡೆಯುವಂತೆ ಮಾಡಿದಳು. ಆದರೆ ಮಗು ಹುಟ್ಟಿದ ನಂತರ ಸುಧಾಳಿಗೆ ಹೊಟ್ಟೆಕಿಚ್ಚು ಪ್ರಾರಂಭವಾಯಿತು ಇದನ್ನು ಅರಿತ ಗ್ರೀಷ್ಮ ತನ್ನ ಮಗುವನ್ನು ಕೊಂದು ಹಾಕಿದಳು. ಆದರೆ ಶಿವನು ಈ ಮಗುವನ್ನು ಬದುಕಿಸಿ ಗ್ರೀಷ್ಮಳನ್ನು ಕೊಲ್ಲಲು ಬಂದನು ಆಗ ಅವಳು ಕೈ ಮುಗಿದು ಪ್ರಾರ್ಥಿಸಿದಾಗ ಅವಳಿಗೆ ಅನುಗ್ರಹಿಸಿ ಅಲ್ಲಿಯೇ ನೆಲ ನಿಂತನು.
ಒಟ್ಟಿನಲ್ಲಿ ಈ 12 ಜ್ಯೋತಿರ್ಲಿಂಗಗಳು ಭಾರತದ ಬೇರೆ ಬೇರೆ ಕಡೆ ಸ್ಥಾಪನೆಯಾಗಿದ್ದು ಅನೇಕ ಕಥೆಗಳನ್ನು ಹೊಂದಿದೆ ಇದರಿಂದಾಗಿ ಶಿವ ಭಾರತದ ಉದ್ದಗಲಕ್ಕೂ ಪ್ರಸಿದ್ಧನಾದ ದೇವನಾಗಿದ್ದಾನೆ ಎಂದು ತಿಳಿದುಕೊಳ್ಳಬಹುದು. ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.