Posted on 28-01-2025 |
Share: Facebook | X | Whatsapp | Instagram
ಶಿವಮೊಗ್ಗ, ಜ.26. ಮಲಯಾಳಂನಿಂದ ಕನ್ನಡಕ್ಕೆ ಇದುವರೆಗೆ 18 ಪುಸ್ತಕಗಳನ್ನು ಅನುವಾದ ಮಾಡಿದ ಸಾಹಿತಿ ಕೆ ಪ್ರಭಾಕರನ್ ರವರು ಗಣರಾಜ್ಯೋತ್ಸವ ದಿನದಂದು ಇಲ್ಲಿನ ಎನ್.ಇ.ಎಸ್. ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ನಾಲ್ಕು ಪುಸ್ತಕಗಳನ್ನು ಒಂದೇ ದಿನ ಬಿಡುಗಡೆ ಮಾಡಿದ್ದಾರೆ.
ಸಮುದಾಯ ಶಿವಮೊಗ್ಗ ಹಾಗೂ ಬಹುಮುಖಿ ಇವರ ಜಂಟಿ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
ಡಾಕ್ಟರ್ ರಾಜೇಂದ್ರ ಚೆನ್ನಿ ಅವರು ಮೂಲ ಲೇಖಕ ಪ್ರೇಮನ್ ಇಲ್ಲತ್ ರವರು ಬರೆದಿರುವ ಆಕ್ರಮಣ ಕಾಲದ ಪ್ರೇಮ ಮತ್ತು ಇತರ ಮಲಯಾಳಂ ಕಥೆಗಳು ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಚೆನ್ನಿಯವರು ಈ ಪುಸ್ತಕದಲ್ಲಿ ಇರುವ ಕಥೆ ಭಯೋತ್ಪಾದನೆಯ ಮೂಲವನ್ನು ಭಾವ ತೀವ್ರತೆಯಲ್ಲಿ ಶೋಧಿಸುತ್ತಾ ಭಾವುಕ ಪರಿಸರದಲ್ಲಿ ಕೊನೆಯಾಗುವ ಕಥೆ ಕೊನೆಗೂ ಅಮೂರ್ತ ಸ್ವರೂಪದಲ್ಲಿಯೇ ಇರುತ್ತದೆ. ಇಲ್ಲಿನ ತಣ್ಣಗಿನ ಕ್ರೌರ್ಯ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ ಪ್ರತಿ ಸುಖೀ ಕುಟುಂಬವು ತನ್ನದೇ ರೀತಿಯಲ್ಲಿ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ಅಸುಖಿ ಆಗಿರುತ್ತದೆ ಪ್ರತಿಯೊಂದು ಕಥೆಯಲ್ಲೂ ಉಪಕಥೆ ಘಟನೆಗಳು ಆಗಿಂದಾಗೆ ಬಂದು ಲೇಖಕರು ನಿರೂಪಣೆಯನ್ನು ಅತ್ಯಂತ ವಿಷಾದಕರವಾದ ರೀತಿಯಲ್ಲಿಯೇ ಮಾಡಿದ್ದಾರೆ ಒಬ್ಬ ಲೇಖಕ ತನ್ನದೇ ಅಂತ ಸಾಕ್ಷಿಗೆ ಮುಖಾಮುಖಿ ಆದಾಗ ಎದುರಿಸುವ ತಲ್ಲಣಗಳು ಪಾಪಪ್ರಜ್ಞೆ ಹತಾಶೆ ಇವೆಲ್ಲವೂ ಕೂಡ ಈ ಕಥೆಗಳಲ್ಲಿ ಬರುತ್ತದೆ ನೇರಳೆ ಹಣ್ಣು ಎಂಬ ಕಥೆಯಲ್ಲಿ ನಾಗರಿಕ ಸಮಾಜ ಮತ್ತು ಬುಡಕಟ್ಟು ಸಮಾಜದ ಅವಲೋಕನವನ್ನು ಮಾಡಿದ್ದು ಕಥೆಯ ಕೊನೆಯಲ್ಲಿ ನಾಗರೀಕ ಜನತೆ ಅನಾಗರಿಕ ವ್ಯಕ್ತಿತ್ವದಿಂದ ಬುಡಕಟ್ಟು ಜನತೆ ನಾಗರಿಕ ವ್ಯಕ್ತಿತ್ವಕ್ಕೆ ಬದಲಾಗುವಂತೆ ಕಾಣುತ್ತದೆ ಆಕ್ರಮಣ ಕಾಲದ ಪ್ರೇಮ ಎನ್ನುವ ಈ ಕಥೆ ಭಯೋತ್ಪಾದನೆಗೆ ತುತ್ತಾಗಿ ಸಂಪೂರ್ಣ ನಾಶವಾಗುವ ಒಂದು ನೈಜ ಪ್ರೇಮದ ಕಥೆಯಾಗಿದೆ ಈ ಕಥೆಗಳಲ್ಲಿ ಹುಟ್ಟು ಹಾಕುವ ಭಾವ ಪ್ರಪಂಚ ಮನುಷ್ಯನ ಅಂತರಂಗ ತಾಕಲಾಟ ಒಟ್ಟಾರೆ ಬದುಕನ್ನು ಶೋಧಿಸುವ ಕೆಲಸವನ್ನು ಮಾಡಿದೆ ಮೂಲ ಕಥೆಗೆ ಧಕ್ಕೆಯಾಗದಂತೆ ಕನ್ನಡದೆ ಕಥೆ ಎನ್ನುವ ರೀತಿಯಲ್ಲಿ ಪ್ರಭಾಕರನ್ ರವರು ಈ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.ಎಂದರು.
ಡಾ. ಕೆ. ನಾಗಭೂಷಣ್ ರವರು ಮೂಲ ಲೇಖಕ ಪ್ರೇಮರಾಜ್ ಕೆ.ಕೆ. ರವರ ಶೆಹನಾಯ್ ಮೊಳಗುವಾಗ ಕಾದಂಬರಿಯನ್ನು ಬಿಡುಗಡೆ ಮಾಡಿದರು. ನಂತರ ಪುಸ್ತಕದ ಬಗ್ಗೆ ಮಾತನಾಡಿದ ಅವರು ದೇಶ ವಿಭಜನೆಯ ಕಾಲದಲ್ಲಿ ಭಾರತಕ್ಕೆ ಬಂದು ನೆಲೆಸಿದ ಪಾರಸಿ ಕುಟುಂಬದ ಒಂದು ಕಥೆಯಾಗಿದೆ ಆ ಕುಟುಂಬದಲ್ಲಿ ಸಂಗೀತದ ಪ್ರೀತಿ ಅತ್ಯಂತ ಹೆಚ್ಚು ಆ ಸಂಗೀತಕ್ಕೆ ಮನಸೋತು ಥಾಮಸ್ ಎಂಬಾತನು ತನ್ನ ಗೆಳೆಯ ಅರವಿಂದ ಎಂಬಾತನ ಸಹಾಯದಿಂದ ಮುಂಬೈ ಸೇರಿ ಆ ಪಾರಸಿ ಕುಟುಂಬದ ಸಂಗೀತಕ್ಕೆ ಮನಸೋತು ಆತ ಕೂಡ ಅವರೊಂದಿಗೆ ಸಂಗೀತ ಕಲಿಯುತ್ತಾನೆ ಈ ನಡುವೆ ಅದೇ ಕುಟುಂಬದ ಅನಾಹಿತಳನ್ನು ಪ್ರೀತಿಸುತ್ತಾನೆ. ಆದರೆ ಆಕೆಯ ಅಣ್ಣ ಕಲಾವಿದನು ಆದ ಫಾಜಿಸ್ ಇದಕ್ಕೆ ಅಡ್ಡಿಪಡಿಸುತ್ತಾನೆ ಆತನಿಗೆ ತನ್ನ ಧಾರ್ಮಿಕ ನಂಬಿಕೆಯೇ ಬಹಳ ಮುಖ್ಯವಾಗುತ್ತದೆ. ಮತ್ತು ಅನಾಹಿತಗಳಿಗಾಗಿ ಥಾಮಸ್ ತಾನು ಕ್ರೈಸ್ತ ಮತವನ್ನು ತೊರೆದು ಪಾರ್ಸಿ ಆಗುತ್ತೇನೆಂದು ಹೇಳಿದರೂ ಕೂಡ ಆತ ಒಪ್ಪುವುದೇ ಇಲ್ಲ ಏಕೆಂದರೆ ನಮ್ಮ ಧರ್ಮ ಶ್ರೇಷ್ಠವಾದ ಧರ್ಮ. ಪರ ಧರ್ಮದಲ್ಲಿ ಜನಿಸಿದವರು ನಮ್ಮ ಧರ್ಮಕ್ಕೆ ಸೇರುವುದಕ್ಕೆ ನಾವು ಒಪ್ಪುವುದಿಲ್ಲ ನಮಗೆ ಕಲೆಗಿಂತ ಪ್ರೀತಿಗಿಂತ ನಮ್ಮ ಧರ್ಮ ಮತ್ತು ಘನತೆ ಮುಖ್ಯ ಎಂದು ಹೇಳಿ ಅವರ ಪ್ರೀತಿಗೆ ಬಿಸಿನೀರು ಎರೆಯೂತ್ತಾನೆ ಈ ಕಾದಂಬರಿಯ ಅರ್ಧ ಭಾಗ ಏನನ್ನು ಹೇಳದೆ ಹೋದರು ಕೂಡ ಕೊನೆಯ ಅರ್ಧದಲ್ಲಿ ಅಂತರ್ಧರ್ಮಿಯ ಸಂಬಂಧ ಎಷ್ಟು ಕಷ್ಟ ಎಷ್ಟು ಘೋರವಾಗಿದೆ ಎಂದು ಅರ್ಥವಾಗುತ್ತದೆ ಪಾರಸಿಗಳಾದ ಇರಾನಿ ಕುಟುಂಬದ ಮದುವೆ ಶವಸಂಸ್ಕಾರ ಇವೆಲ್ಲವೂ ಕೂಡ ಎಷ್ಟು ಕಟ್ಟುನಿಟ್ಟಾಗಿದೆ ಎಂದು ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ ಪಾರಸಿ ಧರ್ಮದಲ್ಲೂ ಕೂಡ ಇತರ ಧರ್ಮಗಳಿಗಿಂತ ಅತ್ಯಂತ ಹೆಚ್ಚಿನ ಮಟ್ಟದಲ್ಲಿಯೇ ಸ್ತ್ರೀಯರ ಶೋಷಣೆಯಾಗುತ್ತದೆ ಗಂಡಸರ ಅಭಿಪ್ರಾಯವೇ ಮುಖ್ಯ ಹೊರತು ಅದನ್ನು ಪ್ರಶ್ನಿಸುವ ಹಕ್ಕು ಸ್ತ್ರೀಯರಿಗೆ ಇಲ್ಲ ಹಾಗಾಗಿ ಒಂದು ಅಂತರ್ಧರ್ಮಿಯ ಪ್ರೇಮ ಕಥೆ ದುರಂತದಲ್ಲಿ ಮುಕ್ತಾಯವಾಗುತ್ತದೆ ಕಾದಂಬರಿಯ ಕೊನೆ ವಿಷಾದ ದಲ್ಲಿ ಮುಗಿಯುತ್ತದೆ ಎಂದರು.
ಡಾ. ಮೇಟಿ ಮಲ್ಲಿಕಾರ್ಜುನ್ ರವರು ಮೂಲ ಕಥೆ ಇ.ಎಂ. ಅಶ್ರಫ್ ರವರ ಯಮುನಾ ನದಿಯ ತೀರಗಳಲ್ಲಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ಕೃತಿ ಅತ್ಯಂತ ವಿಶಿಷ್ಟವಾದ ಕೃತಿಯಾಗಿದೆ ಇದರ ಮೂಲ ಲೇಖಕರು ಇ
ಮಲಯಾಳದ ಅತ್ಯಂತ ಪ್ರಮುಖ ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಎಂ ಮುಕುಂದನ್ ಜೊತೆ ದೆಹಲಿಯಲ್ಲಿ ಸಾಹಿತ್ಯ ಸಂವಾದವನ್ನು ನಡೆಸಿ ಈ ಕೃತಿಯನ್ನು ಬರೆದಿದ್ದಾರೆ. ಈ ಕೃತಿಯಲ್ಲಿ ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಅದರ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಚಿತ್ರಿಸಲಾಗಿದೆ. ಕಾದಂಬರಿಯ ಉದ್ದಕ್ಕೂ ನಮ್ಮ ಸಂಸ್ಕೃತಿ ಮತ್ತು ಚರಿತ್ರೆಗಳ ಪಲ್ಲಟವನ್ನು ಕೂಡ ತಿಳಿದುಕೊಳ್ಳುವುದಕ್ಕೆ ಇಲ್ಲಿನ ಪ್ರಯೋಗಗಳು ಸಹಕಾರಿಯಾಗಿದೆ ಈ ಕಾದಂಬರಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟು ಒಂದು ಹೊಸ ಮಾದರಿಯನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದೆ. ಸಂಪೂರ್ಣ ಕಾದಂಬರಿ ಅಸಂಗತ ಕಾದಂಬರಿಯಂತಿದ್ದು ಕೊನೆಗೆ ದೆಹಲಿ ಎನ್ನುವುದು ಕೇವಲ ಒಂದು ಭೂ ಪ್ರದೇಶ ಮಾತ್ರವಲ್ಲ ಅದು ಕಾಲದ ಭೂಮಿಯೊಂದಿಗೆ ಚಲಿಸುತ್ತಿರುವ ಬದುಕಿನ ಉಗ್ರ ಮುಖ ಎಂಬುದನ್ನು ಲೇಖಕರು ಸ್ಪಷ್ಟಪಡಿಸುತ್ತಾರೆ ದೆಹಲಿ ಹರಿದ್ವಾರ ಯಮುನಾ ನದಿಯ ಉದ್ದಕ್ಕೂ ಕಾದಂಬರಿ ಎಲ್ಲಾ ಘಟನೆಗಳನ್ನು ತೋರಿಸುತ್ತಾ ನದಿ ಹರಿದಂತೆ ಲೇಖಕರ ಮತ್ತು ಓದುಗರ ಮನಸ್ಸಿನಲ್ಲಿಯೂ ವಿಚಾರಗಳು ಹರಿಯುವಂತೆ ಮಾಡಿದೆ ಎಂದರು.
ಮೂಲ ಸುರೇಶ್ ಕಿಳ್ಳಿಯೂರು ರವರ ಸೈಬರ್ ಮ್ಯಾಟ್ರಿಮೋನಿ 2025 ಮತ್ತು ಇತರ ಮಲಯಾಳಂ ಕಥೆಗಳು ಎಂಬ ಪುಸ್ತಕವನ್ನು ಡಾ. ಕೆ.ಜಿ ವೆಂಕಟೇಶ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದರು ಈ ಕೃತಿಯಲ್ಲಿ 18 ಸಣ್ಣ ಕಥೆಗಳಿದ್ದು ಲೇಖಕರು ಹತ್ತಕ್ಕೂ ಹೆಚ್ಚು ಕಥೆಗಳನ್ನ ತಮ್ಮ ಬಾಲ್ಯದ ಹುಡುಗಾಟಗಳನ್ನು ವರ್ಣಿಸಲು ಬಳಸಿದ್ದಾರೆ, ತಿಳಿ ಹಾಸ್ಯ ಲೇಪನದ ಈ ಕಾದಂಬರಿ ನಮ್ಮನ್ನ ನಗಿಸುತ್ತದೆ ವಾಸ್ತವದ ಸನ್ನಿವೇಶವನ್ನು ತಿಳಿಸಿ ಗಂಭೀರ ಚಿಂತನೆಗೆ ದೂಡುತ್ತದೆ ಎಂದು ಹೇಳುತ್ತಾ ಅವರಾಚನೂ ಅಪ್ಸರೆಯು ಮತ್ತೆ ಒಂದು ಅಂಡರ್ವೇರ್ ಕಥೆ ಉದಾಹರಿಸುತ್ತಾ ಚಂದದ ಹುಡುಗಿ ಒಬ್ಬಳು ಗೃಹಸ್ಥನೊಬ್ಬನನ್ನು ಟ್ರೈನ್ ನಲ್ಲಿ ಮರಳುಗೊಳಿಸಿ ಅವನಲ್ಲಿದ್ದ ಹಣವನ್ನು ಲಪಟಾಯಿಸಿ ಆತ ಹುಚ್ಚನಾಗುವಂತೆ ಮಾಡುವುದನ್ನು ಹೇಳುತ್ತಾ ಲೇಖಕರು ಸಮಾಜದ ಅಂಕು ಡೊಂಕುಗಳು ಹೇಗಿವೆ ಎಂದು ತಮ್ಮ ಎಲ್ಲಾ ಕಥೆಗಳಲ್ಲೂ ತೋರಿಸಿದ್ದಾರೆ ಹೆಣ್ಣು ಮತ್ತು ಗಂಡಿಗೆ ಇರುವ ವ್ಯತ್ಯಾಸಗಳು ಶ್ರೀಮಂತ ಮತ್ತು ಬಡವ ಹೊಂದಿರುವ ವ್ಯತ್ಯಾಸಗಳು ದೇವರ ಕೃಪೆ ಮತ್ತು ಆತನ ಆಡಂಬರದ ಬದುಕು ಮತ್ತು ಶ್ರೀಸಾಮಾನ್ಯರ ಬಗ್ಗೆ ಕಥೆ ತಿಳಿಸುತ್ತಾ ಹೋಗುತ್ತದೆ ತಮಾಷೆಯ ಪುಸ್ತಕವೆಂದು ಕೈಗೆತ್ತಿಕೊಂಡು ಪುಸ್ತಕ ಮುಗಿಸಿದಾಗ ಸಾಕಷ್ಟು ಚಿಂತನೆಗಳು ನಮ್ಮ ತಲೆಯಲ್ಲಿ ಹೋಗುತ್ತವೆ ಎಂದರು.
ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಕೇಶವಶರ್ಮ ರವರು ಮಾತನಾಡುತ್ತಾ ಕನ್ನಡ ಮತ್ತು ಮಲಯಾಳಿಗಳ ನಡುವಿನ ಸಂಬಂಧ ಅವರಿಬ್ಬರ ವಿಚಾರಗಳು ನೋವು ಸಂಬಂಧಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದನ್ನು ತಿಳಿಸುತ್ತಾ ಕನ್ನಡ ಮತ್ತು ಮಲಯಾಳಂ ಒಂದೇ ರೀತಿಯ ಶ್ರಮ ಸಂಸ್ಕೃತಿಯನ್ನು ಹೊಂದಿದೆ ಎಂದರು.
ಪುಸ್ತಕದ ಅನುವಾದಕ ಕೆ ಪ್ರಭಾಕರನ್ ರವರನ್ನು ಸಮುದಾಯ ಶಿವಮೊಗ್ಗ ಮತ್ತು ಬಹುಮುಖಿ ಜಂಟಿಯಾಗಿ ಸನ್ಮಾನಿಸಿತು. ತಮ್ಮ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರಭಾಕರನ್ ರವರು ಪ್ರಾರಂಭದಲ್ಲಿ ಕುತೂಹಲಕ್ಕಾಗಿ ಒಂದೊಂದೆ ಪುಸ್ತಕವನ್ನು ಓದಿ ಅನುವಾದಿಸಿದೆ ಈಗ 18 ಪುಸ್ತಕಗಳು ಆಗಿದೆ ಕನ್ನಡ ಓದುಗರು ಅತ್ಯಂತ ಪ್ರೀತಿಯಿಂದ ಇದನ್ನು ಸ್ವಾಗತಿಸಿ ಅನುವಾದವನ್ನು ಒಪ್ಪಿಕೊಂಡಿದ್ದಾರೆ ಕೇರಳ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ಎರಡು ಒಂದೇ ಎನ್ನುವ ರೀತಿಯಲ್ಲಿ ಐಕ್ಯವಾಗಿದೆ ಕೇರಳದ ಪ್ರಮುಖ ಕಥೆಗಾರರು ಕನ್ನಡಿಗ ಓದುಗರಿಗೆ ,
ಅದೇ ರೀತಿ ಕನ್ನಡದ ಪ್ರಮುಖ ಕವಿಗಳು ಕೇರಳಕ್ಕೆ ಪರಿಚಯವಾಗಿದ್ದಾರೆ ಎಂದರು.
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಸಮುದಾಯ ಶಿವಮೊಗ್ಗದ ಅಧ್ಯಕ್ಷರಾದ ಶ್ರೀನಿವಾಸರವರು ಮಾತನಾಡಿ ಪ್ರಭಾಕರ್ ರವರು ಅತ್ಯಂತ ಕಷ್ಟಪಟ್ಟು ಈ ಕಾರ್ಯವನ್ನು ನಿರ್ವಹಿಸಿದ್ದಾರೆ ಏಕಕಾಲಕ್ಕೆ ನಾಲ್ಕು ಕಥೆಯ ಪುಸ್ತಕವನ್ನು ಅನುವಾದ ಮಾಡುವುದು ಅಷ್ಟು ಸುಲಭವಾದ ಮಾತಲ್ಲ ಎಂದು ತಿಳಿಸಿ ಕಾರ್ಯಕ್ರಮಕ್ಕೆ ನೆರವು ನೀಡಿದ ಹಾಗೂ ಪುಸ್ತಕದ ಬಗ್ಗೆ ಮಾತನಾಡಿದ ಎಲ್ಲ ವಿದ್ವಾಂಸರನ್ನು ಅಭಿನಂದಿಸಿ ಆಗಮಿಸಿದ ಎಲ್ಲಾ ಕನ್ನಡದ ಸಾಹಿತ್ಯ ಅಭಿಮಾನಿಗಳಿಗೂ ವಂದಿಸಿದರು.