Posted on 26-01-2025 |
Share: Facebook | X | Whatsapp | Instagram
ಸಾಹಿತಿಗಳು ನಿರ್ಭಿತಿಯಿಂದ ಬರೆಯಬೇಕು ಎಂದು ಕ್ರಾಂತಿಕಿಡಿ ಪತ್ರಿಕೆಯ ಸಂಪಾದಕರಾದ ಡಾ. ಕೆ.ಜಿ. ವೆಂಕಟೇಶ್ ಹೇಳಿದರು ಅವರು ಹೊಸನಗರದಲ್ಲಿ ಕ.ಸಾ.ಪ. ವತಿಯಿಂದ ನಡೆದ ಶ್ರೀಮತಿ ದಾನಮ್ಮ ಶ್ರೀ ಬೊಮ್ಮನಾಯಕರ ದತ್ತಿನಿಧಿ ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕಿನ ಸಾಹಿತ್ಯ ಮತ್ತು ಸಾಹಿತಿಗಳ ಪರಿಚಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಹೊಸನಗರ ತಾಲೂಕಿನ ಹೆಚ್ಚಿನ ಪ್ರಮುಖ ಸಾಹಿತಿಗಳು ಧಾರ್ಮಿಕ ಸಾಹಿತ್ಯದ ಕಡೆ ಹೆಚ್ಚು ಒಲವನ್ನು ಹೊಂದಿದ್ದಾರೆ. ಆದರೆ ಇಂತಹ ನಿರ್ದಿಷ್ಟವಾದ ಸಿದ್ಧಾಂತವನ್ನು ಇಟ್ಟುಕೊಂಡು ಸಾಹಿತ್ಯ ರಚನೆ ಮಾಡಿದರೆ ಅದು ಸಮಾಜದ ಸಂಪೂರ್ಣ ವರ್ಗವನ್ನು ತಲುಪದೆ ಕೆಲವೇ ವರ್ಗದವರ ಮನ್ನಣೆಗೆ ಮಾತ್ರ ಪಾತ್ರವಾಗುತ್ತದೆ.ಪಂಪ ಹೇಳಿದಂತೆ ಮನುಷ್ಯ ಜಾತಿ ತಾನೊಂದೇ ವಲಂ ಅದೇ ರೀತಿ ಎಲ್ಲ ಮನುಷ್ಯರಿಗೂ ಅನ್ವಯವಾಗುವ ಮಾನವೀಯ ಸಾಹಿತ್ಯ ಇಂದಿನ ಅಗತ್ಯ. ಎಂದು ತಿಳಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಜನಿಸಿ ರಾಷ್ಟ್ರಕವಿಯಾದ ಕುವೆಂಪು ಬರೆದದ್ದು ಎರಡು ಕಾದಂಬರಿಗಳು ಮಾತ್ರ ಹೊಸನಗರದಲ್ಲಿ 90 ಕಾದಂಬರಿಗಳನ್ನು ಬರೆದವರು ಕೂಡ ಇದ್ದಾರೆ. ಆದರೆ ಸಾಹಿತ್ಯದಲ್ಲಿ ಗಟ್ಟಿತನ ಇಲ್ಲದೆ ಇದ್ದರೆ ಅವರು ಎಂದು ಪ್ರಖ್ಯಾತರಾಗುವುದಿಲ್ಲ .
ಇತ್ತೀಚಿನ ಅನೇಕರು ಸಾಹಿತ್ಯ ಕ್ಷೇತ್ರಕ್ಕೆ ಕವನಗಳ ಮೂಲಕ ಪ್ರವೇಶ ಪಡೆಯುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಆದರೂ ಕೂಡ ಕೇವಲ ಕವನ ಸಂಕಲನಗಳನ್ನು ಬರೆಯುತ್ತ ಇದ್ದರೆ ಅವರು ಪ್ರಮುಖ ಸಾಹಿತಿಯಾಗಲು ಸಾಧ್ಯವಿಲ್ಲ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶ ಮಾಡಿದರೆ ಅವರಿಗೆ ಜ್ಞಾನ ಹೆಚ್ಚುತ್ತದೆ.
ಸಾಹಿತ್ಯವನ್ನು ರಚನೆ ಮಾಡುವವರು ಮೊದಲು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಈಗಾಗಲೇ ಬರೆದಿರುವ ಕವಿಗಳನ್ನು ಅವರ ಸಾಹಿತ್ಯವನ್ನು ಓದಿಕೊಂಡಿರಬೇಕು ಯಾವ ವ್ಯಕ್ತಿಗೆ ಓದುವ ಆಸಕ್ತಿ ಕಡಿಮೆ ಇರುತ್ತದೆಯೋ ಆತ ಎಂದೂ ಕೂಡ ಉತ್ತಮ ಸಾಹಿತಿ ಆಗಲಾರ ಎಂದು ಹೇಳಿ ಹೊಸನಗರದ ಪ್ರಮುಖ ಕವಿಗಳ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ಮತ್ತು ಪುಸ್ತಕವನ್ನು ಪ್ರಕಟಪಡಿಸಿರುವ ಸುಮಾರು 40 ಕವಿಗಳ ಕೃತಿಗಳನ್ನು ಹೆಸರಿಸಿದರು.
ಇದೇ ವೇದಿಕೆಯಲ್ಲಿ ಶ್ರೀಮತಿ ಸುಬ್ಬಲಕ್ಷ್ಮಿ ಮತ್ತು ಶ್ರೀ ಸೀನಪ್ಪ ಶೆಟ್ಟಿ ದತ್ತಿ ನಿಧಿ ಅಡಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡಿದ
ನಿವೃತ್ತ ಉಪನ್ಯಾಸಕ ಡಿ.ಎಸ್.ನಾಗರಾಜ್ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಸಾಕಷ್ಟು ವಿದ್ವಾಂಸರುಗಳು ತಮ್ಮ ವ್ಯಾಖೈಗಳನ್ನು ನೀಡಿದ್ದಾರೆ. ಸಾಹಿತಿಗಳಿಗೆ ಸಾಂಸ್ಕೃತಿಕ ಜ್ಞಾನ ಇರಬೇಕು ಜ್ಞಾನವಿಲ್ಲದಿದ್ದರೆ ಸಾಹಿತ್ಯ ಶುಷ್ಕವಾಗುತ್ತದೆ.ಸಾಹಿತ್ಯವನ್ನು ಸಂಸ್ಕೃತಿಗೆ ಅನುಗುಣವಾಗಿ ಅರ್ಥಮಾಡಿಕೊಂಡರೆ ಸಾಹಿತ್ಯ ಸಂಸ್ಕೃತಿ ಎರಡು ಕೂಡ ಸಮೃದ್ಧಿಯಾಗುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಣೇಶ್ ಮೂರ್ತಿ ನಾಗರಕೊಡಿಗೆ ಇವರು ಅಧ್ಯಕ್ಷತೆ ವಹಿಸಿದ್ದರು. ಇಬ್ಬರು ಸಾಹಿತಿಗಳ ಪರಿಚಯವನ್ನು ತಿಳಿಸಿ ಇವರಿಬ್ಬರೂ ಕೂಡ ಹೊಸನಗರದವರೆ ಆಗಿದ್ದು ಊರಿನಿಂದ ಬಹುದೂರ ಹೋಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ ಇಂಥವರಿಂದ ಊರಿಗೆ ಹೆಮ್ಮೆ ಎಂದರು.
ಶ್ರೀಮತಿ ಅಶ್ವಿನಿ ಪಂಡಿತ್ ಅವರು ನಿರೂಪಣೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಆರು ಜನ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.