*ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ*

Culture Literature

Posted on 21-01-2025 |

Share: Facebook | X | Whatsapp | Instagram


*ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ*

*ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ* ಎಂಬ ವಿಭಿನ್ನ ಕಾರ್ಯಕ್ರಮವನ್ನು ಅಜೇಯ ಸಂಸ್ಕೃತಿ ಬಳಗ ಶಿವಮೊಗ್ಗ ಇವರು ಕರ್ನಾಟಕ ಸಂಘ ಶಿವಮೊಗ್ಗದಲ್ಲಿ ಇಡೀ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಮ್ಮ ಎಂಬ ಅನುರಣಿಸುವ ಹೃದಯದ ಅಂಬರ ಚಿತ್ತಾರವನ್ನು ಇಡೀ ದಿವಸ ಉಪನ್ಯಾಸ, ಹಾಡು, ನೃತ್ಯ, ಕಿರುಚಿತ್ರಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಡಲಾಯಿತು. 

ಪ್ರಥಮವಾಗಿ ವೀಣಾ ಬನ್ನಂಜೆಯವರು ಸತ್ಯಕಾಮರು ರಚಿಸಿದ ಮಾತೃ ಲಹರಿಯ ಕಾವ್ಯದೊಡನೆ ಮಾತೃ ಶಕ್ತಿಯ ವಿಶಿಷ್ಟತೆಯನ್ನು ವಿವರಿಸಿದರು. ಕುಂಡಲಿನಿ ಶಕ್ತಿ ಜಾಗೃತಿ ಮಾತೆಯಿಂದ ಹೇಗಾಗುತ್ತದೆ ಎಂದು ವಿವರಿಸಿದರು.

ಜಗದೀಶ್ ಶರ್ಮ ಸಂಪ ಅವರು ರಾಮಾಯಣ ಮಹಾಭಾರತ ಮಹಾಕಾವ್ಯದಲ್ಲಿ ಚಿತ್ರತವಾಗಿರುವ ಕೌಸಲ್ಯ, ಕೈಕಸಿ, ಕೈಕೇಯಿ, ಸೀತೆ, ಗಂಗೆ, ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ, ಸುಭದ್ರೆ ಕುರಿತು ಅಮೋಘವಾಗಿ ಮಾತನಾಡಿದರು. 

 ವಿದ್ವಾನ್ ಜಿ ಎಸ್ ನಟೇಶ್ ರವರು ವೇದ, ಶಂಕರಾಚಾರ್ಯರ ಮಾತೃ ಪಂಚಕ , ಉಪನಿಷತ್ತು, ಜಾನಪದ ಸಂಸ್ಕೃತಿಯಲ್ಲಿ ತಾಯಿಯ ಚಿತ್ರಣ ಕುರಿತು ಸಂಸ್ಕೃತಿ ಚಿಂತಕಿಯಾಗಿ ತಾಯಿ ಹೇಗೆ ಧಾರೆ ಎರೆಯುತ್ತಾಳೆ ಎಂದು ವಿವರಿಸಿದರು. 

ಜೋಗಿ ಅವರು ಕನ್ನಡ ಹೊಸಗನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಇವುಗಳಲ್ಲಿ ತಾಯಿಯ ಪರಿಕಲ್ಪನೆಯನ್ನು ಕಥೆ, ಕವಿತೆ, ಕಾದಂಬರಿಗಳ ತಾಯ್ತನದ ಪ್ರಸಂಗಗಳನ್ನು ವಿವರಿಸಿದರು. 

 ಮಧ್ಯಾಹ್ನದ ಊಟದ ಸಮಯದಲ್ಲಿ ತಾಯಂದಿರು ಕೈತುತ್ತು ನೀಡುವುದರ ಮೂಲಕ ಭಿನ್ನವಾಗಿ ಊಟವನ್ನು ಆಯೋಜನೆಯನ್ನು ಮಾಡಿದ್ದರು. 

ವಸುದೇಂದ್ರ ರವರು \'ನಮ್ಮಮ್ಮ ಅಂದ್ರೆ ನನಗಿಷ್ಟ\' ಎಂಬ ಅವರ ಕೃತಿಯ ಕಥಾ ವಾಚನದ ಮೂಲಕ ಎಲ್ಲರ ಕಣ್ಣನ್ನು ತೇವ ಮಾಡಿ ಆದ್ರತೆಗೊಳಿಸಿದರು.

ಗಮಕ ಕಲಾ ಗ್ರಾಮದ ಪ್ರಸಾದ್ ಭಾರದ್ವಾಜ್ ಹಾಗೂ ಧೀಮಂತ ಭಾರದ್ವಾಜ್ ಗಮಕದಲ್ಲಿ ಮಾತೃ ಸಂವೇದನೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಸ ಋಷಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ಕೈಕೇಯಿ ಹಾಗೂ ಭರತನ ಸಂವಾದದ ಪ್ರಸಂಗವನ್ನು ಮಾತೃ ಸಂವೇದನೆಯ ಹಿನ್ನೆಲೆಯಲ್ಲಿ ವಿವರಿಸಿದರು. 

ಅಮ್ಮ ಕಾರ್ಯಕ್ರಮದಲ್ಲಿ ಹೊಸನಗರದ ಕೆ.ಎಸ್. ವಿನಾಯಕರವರು ಗೌರಿ ಮತ್ತು ಗಣಪತಿ ಇರುವ ತಮ್ಮ ತಾಯಿ ಮಗು ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು. ಮಾತೃ ಸಂವೇದನೆಯ ಕಿರು ಚಿತ್ರಗಳ ಪ್ರದರ್ಶನ ಸುಂದರವಾಗಿತ್ತು. ಲಾಲಿ ಎಂಬ ದೇವ ಭಾಷೆ ಎಂಬ ಕನ್ನಡ ಗೀತೆಗಳಿಗೆ ಸಹನಾ ಚೇತನ್ ರವರು ಭಾವಾಭಿನಯ ಮಾಡುವುದರ ಮೂಲಕ ಮಾತೃತ್ವವನ್ನು ಪ್ರತಿಬಿಂಬಿಸಿದರು. 

 ವಿಘ್ನೇಶ್ ಭಟ್ ರವರು ಭಾರತೀಯ ಸಂಸ್ಕೃತಿಯಲ್ಲಿ ಮಾತೃ ಆರಾಧನೆ ವಿಷಯವನ್ನು ಕುರಿತು ಮಾತನಾಡಿದರು. ನಾಟ್ಯಾಲಯದ ವಿದ್ಯಾರ್ಥಿಗಳಿಂದ ಅಮ್ಮನ ಕುರಿತ ಗೀತೆಗಳಿಗೆ ನೃತ್ಯ ಮಾಡಿದರು ಹಾಗೂ ಅಮ್ಮನ ಕುರಿತ ಗೀತೆಗಳು ಹಾಡಿದರು. ಒಟ್ಟಾರೆ ಇಡೀ ದಿನ ಅಮ್ಮನ ಸಂಸ್ಕರಣೆಯಲ್ಲಿ ಎಲ್ಲರ ಹೃದಯ ಭಾವತುಂಬಿ, ರಸಾಸ್ವಾಧನೆಯಾದದ್ದು ಈ ಕಾರ್ಯಕ್ರಮದ ಯಶಸ್ಸು. ಎಲ್ಲರೂ ತಮ್ಮ ತಾಯಂದಿರನ್ನು ನೆನೆದರು ಹಾಗೂ ಸೃಷ್ಟಿ ಕ್ರಿಯೆಯ ಮೂಲವಾದ ತಾಯಿಗೆ ಮನಸಾರೆ ವಂದಿಸಿದರು.

 ತುಂಬಾ ಅಚ್ಚುಕಟ್ಟಾದ ಕಾರ್ಯಕ್ರಮವಾಗಿತ್ತು. ವಿದ್ವಾಂಸರ ವಿಷಯಗಳು ಸಹ ವಿಭಿನ್ನತೆಯಿಂದ ಕೂಡಿದ್ದು ತಾಯಿಯ ಸಂಪೂರ್ಣ ಚಿತ್ರಣವನ್ನು, ಅವಳ ತ್ಯಾಗ- ಅರ್ಪಣಾ ಗುಣವನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸುವಂತಹಾಯಿತು. ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಅಜೇಯ ಸಂಸ್ಕೃತಿ ಬಳಗಕ್ಕೆ, ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ, ಪ್ರಾಯೋಜಕರಿಗೂ ಧನ್ಯವಾದಗಳು.

 🙏 ಡಾ. ಬಸವರಾಜಪ್ಪ ಎಂ. ಶಿಕ್ಷಕರು ಶಿವಮೊಗ್ಗ 🙏

Search
Recent News