Posted on 17-10-2025 |
Share: Facebook | X | Whatsapp | Instagram
*ಎನ್ಇಎಸ್ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ – 300 ವಿದ್ಯಾರ್ಥಿಗಳು ನೇತ್ರದಾನಕ್ಕೆ ನೋಂದಣಿ*
ನಗರದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಹಾಗೂ ನೇತ್ರದಾನ ನೋಂದಣಿ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀ ಗುರುರಾಜ್, ಶಂಕರ ಕಣ್ಣಿನ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ಡಾ. ಕೀರ್ತಿ ಮಂಜುನಾಥ್, ಭಾರತೀಯ ರೆಡ್ ಕ್ರಾಸ್ ಶಿವಮೊಗ್ಗ ಶಾಖೆಯ ಚೇರ್ಮನ್ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಶ್ರೀ ಟಿ.ಎ. ಅಶ್ವತ ನಾರಾಯಣ ಶ್ರೇಷ್ಠಿ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಜೀವ ಸದಸ್ಯರಾದ ಡಾ. ಅರವಿಂದ್ ಎಸ್.ಟಿ. ಮತ್ತು ಶಂಕರ ಕಣ್ಣಿನ ಆಸ್ಪತ್ರೆಯ ಬ್ಯುಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಶ್ರೀ ಪ್ರದೀಪ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕೀರ್ತಿ ಮಂಜುನಾಥ್ ಅವರು ನೇತ್ರದಾನದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ, ಕಣ್ಣು ಕಳೆದುಕೊಂಡವರಿಗೆ ಹೊಸ ಜೀವನ ನೀಡುವಂತಹ ಸೇವಾಭಾವನೆಯ ಅಗತ್ಯತೆಯನ್ನು ಹೇರಳವಾಗಿ ವಿವರಿಸಿದರು. ನೇತ್ರದಾನವು ಸಮಾಜದಲ್ಲಿ ಬೆಳಕು ಹರಡುವ ಅತ್ಯುತ್ತಮ ಮಾನವೀಯ ಸೇವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇತ್ರದಾನಕ್ಕೆ ಪ್ರತಿಜ್ಞೆ ಬದ್ಧರಾಗಿ ನೋಂದಣಿ ಮಾಡಿಕೊಂಡರು ಎಂಬುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿತ್ತು. ಈ ಮೂಲಕ ಯುವ ಪೀಳಿಗೆಯರು ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಳ್ಳುವ ಮೊದಲ ಹೆಜ್ಜೆಯನ್ನು ಇಡುವ ಮೂಲಕ ಅನೇಕರಿಗೆ ಪ್ರೇರಣೆಯಾದರು.
ಕಾರ್ಯಕ್ರಮದ ಉಸ್ತುವಾರಿ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾಗಿರುವ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಈಶ್ವರ್ ಎಸ್.ಎಂ. ವಹಿಸಿದ್ದರು. ಅತಿಥಿಗಳು, ಅಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.