Posted on 06-09-2025 |
Share: Facebook | X | Whatsapp | Instagram
ಶಿಕ್ಷಕರು ಎಂದರೆ ವಿದ್ಯೆ ಮಾತ್ರ ಕಲಿಸುವವರು ಮಾತ್ರ ಎಂದು ತಿಳಿದಿದ್ದೇವೆ. ಆದರೆ ವಿದ್ಯೆ ಮಾತ್ರವಲ್ಲದೆ ಶಿಸ್ತು, ಕಾರ್ಯ ನಮ್ಮನ್ನು ಇನ್ನಷ್ಟು ಬುದ್ಧಿವಂತರಾಗಲು ಸಹಾಯ ಮಾಡುವವರು ಅವರು. ಅದರಲ್ಲಿ ನನ್ನ ಮೆಚ್ಚಿನ ಶಿಕ್ಷಕರ ಬಗ್ಗೆ ಕುರಿತು ಹೇಳುತ್ತಿದ್ದೇನೆ ಅವರು ನನ್ನ ಪ್ರೀತಿಯ ಶಿಕ್ಷಕ ಸಂತೋಷ್ ಎಂಡಿ ಸರ್ .
ಸಂತೋಷ್ ಸರ್ ಪಾಠ ಮಾಡುವ ರೀತಿ, ಯಾರಿಗೂ ಬೇದಭಾವವಿಲ್ಲದೆ ತೋರಿಸುವ ಪ್ರೀತಿ, ಅಷ್ಟೇ ಅಲ್ಲದೆ ನಮಗೆ ಅರ್ಥವಾಗದ ವಿಷಯವನ್ನು ಪ್ರತಿಬಾರಿಯೂ ಹೇಳಿಕೊಡುವ ರೀತಿ ಬಹಳ ವಿಶೇಷ. ನನಗೆ ಬಹಳ ಮನಸ್ಸಿಗೆ ಹತ್ತಿರವಾದ ವ್ಯಕ್ತಿ. ಅವರಿಂದ ನಾವು ಎಷ್ಟು ತಿಳಿದರೂ ಸಾಲದು. ಅವರಿಗೆ ಕೋಪ ಬರುವುದು ಕಡಿಮೆ. ಆದರೆ ಕೋಪವನ್ನು ಕಡಿಮೆ ಮಾಡಿಕೊಂಡು ನಿಧಾನವಾಗಿ ನಮಗೆ ಆ ವಿಷಯವನ್ನು ತಿಳಿಸಿ ನಮ್ಮಲ್ಲಿ ಇರುವ ಆತಂಕವನ್ನು ಕಡಿಮೆ ಮಾಡುತ್ತಿದ್ದರು. ಅವರ ಬಗ್ಗೆ ಹೇಳಿದಷ್ಟು ಸಾಲದು.
ಒಂದು ದಿನ ನಾನು ಅವರು ಪಾಠ ಮಾಡುವ ವಿಷಯದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದೆ. ಆದರೆ ಅವರು ನನ್ನ ತಪ್ಪನ್ನು ತಿದ್ದಿ ಅದನ್ನು ಸರಿಪಡಿಸಿದರು. ಎಲ್ಲರ ಜೀವನದಲ್ಲಿಯೂ ಇಂತಹ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಇರಲೇಬೇಕು ಶಿಕ್ಷಕರಾಗುವುದು ಸುಲಭವಲ್ಲ. ಏಕೆಂದರೆ ಅವರಿಗೆ ಜೀವನದಲ್ಲಿ ತಾಳ್ಮೆ ಮುಖ್ಯ. ತಾಳ್ಮೆ ಇಲ್ಲವಾದರೆ ಶಿಕ್ಷಕರಾಗುವುದು ಕಷ್ಟದ ಮಾತು. ಎಲ್ಲಾ ರೀತಿಯ ಮಕ್ಕಳನ್ನು ಸುಧಾರಿಸಬೇಕು. ಅವರಿಗೆ ಆ ಗುಣವಿದೆ. ಅವರಿಗೆ ಕ್ಷಮಿಸುವ ಗುಣವಿದೆ. ಹೊರಗಿನ ಜ್ಞಾನ ಪ್ರಪಂಚದ ಕುರಿತು ಹೇಳುತ್ತಿದ್ದರು. ಮಕ್ಕಳಿಗೆ ಹೆದರಿಸಬಾರದು, ಅದರಿಂದ ಅವರು ಕುಗ್ಗಿ ಹೋಗುತ್ತಾರೆ, ಆದ್ದರಿಂದ ಮಕ್ಕಳಿಗೆ ಧೈರ್ಯ ತುಂಬಿ, ಸಹನೆ ತಾಳ್ಮೆಯಿಂದ ಕಾಳಜಿ ತೋರಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದ್ದರಿಂದ ಮಕ್ಕಳಲ್ಲಿ ಒಂದು ಛಲ ಬರುತ್ತಿತ್ತು ಮುಂದಿನ ಭವಿಷ್ಯಕ್ಕಾಗಿ ಅವರು ತಮ್ಮಲ್ಲಿರುವ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು.
ಶಿಕ್ಷಕರು ಯಾರನ್ನು ಸುಮ್ಮನೆ ಬಯ್ಯುವುದಿಲ್ಲ. ನಮ್ಮಲ್ಲಿ ಉತ್ಸಾಹ ತುಂಬಿ ನಿನ್ನ ಕೈಯಲ್ಲಿ ಎಲ್ಲಾ ಕೆಲಸವೂ ಆಗುತ್ತದೆ, ಮಾಡು ಎಂಬ ಭರವಸೆಯನ್ನು ಕೊಟ್ಟರೆ ಸಾಕು ನಮ್ಮಲ್ಲಿ ಒಂದು ಸ್ಪೋಟಕ ಶಕ್ತಿ ಉತ್ಪತ್ತಿಯಾಗುತ್ತದೆ. ಆ ರೀತಿ ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ನಿಜವಾಗಿಯೂ ನಾನು ಪುಣ್ಯ ಮಾಡಿ ಬಂದಿರುವೆ. ಅಂತಹ ಒಬ್ಬ ಶಿಕ್ಷಕರನ್ನ ಪಡೆಯುವುದಕ್ಕೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ಒಂದು ಮಾರ್ಗ ಸಿಕ್ಕಿದೆ. ಎಲ್ಲಾ ಶಿಕ್ಷಕರು ನಮಗೆ ದಾರಿ ದೀಪವಾಗುತ್ತಾರೆ. ಅಪ್ಪ ಅಮ್ಮ ಹೇಗೋ ಹಾಗೆ ಶಿಕ್ಷಕ ಶಿಕ್ಷಕಿಯು ಹಾಗೇನೇ. ಆದ್ದರಿಂದ ನಾವು ತಿಳಿಯಬೇಕು ಎಷ್ಟು ಅವರು ಸಹಾಯ ಮಾಡಿದ್ದಾರೆ ಮುಂದೆ ಒಂದು ದಿನ ನಾವು ಅವರ ಜೀವನದಲ್ಲಿ ದಾರಿ ದೀಪವಾಗಬೇಕು ಹೀಗೆ ಎಲ್ಲರೂ ನಮ್ಮ ಭವಿಷ್ಯಕ್ಕಾಗಿಯೇ ಚಿಂತಿಸುತ್ತಾರೆ ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳದೆ ದಡ್ಡರ ಹಾಗೆ ವರ್ತಿಸುತ್ತೇವೆ. ಆದ್ದರಿಂದ ಅವರು ತುಂಬಾ ನೊಂದುಕೊಳ್ಳುತ್ತಾರೆ ಅದು ನಮಗೆ ಗೊತ್ತಾಗುವುದಿಲ್ಲ ನಮಗಾಗಿ ಹಗಲು ರಾತ್ರಿ ಹೇಗೆ ಅಪ್ಪ ಅಮ್ಮ ಕಷ್ಟ ಪಡುತ್ತಾರೋ ಹಾಗೆ ಶಿಕ್ಷಕರು ನಮಗೆ ಒಂದು ವಿಷಯವನ್ನು ತಿಳಿಸಲು ಬಹಳ ಕಷ್ಟ ಪಡುತ್ತಾರೆ. ಎಲ್ಲಾ ರೀತಿಯ ಶಿಕ್ಷಕರಿಗೆ ಒಂದು ನಮಸ್ಕಾರ ಈ ಒಂದು ಅಕ್ಷರ ಬರೆಯಲು ಅವರೇ ಕಾರಣ ಅದನ್ನು ತಿಳಿಸಿಕೊಟ್ಟ ನನ್ನ ಶಿಕ್ಷಕರಿಗೆ ನನ್ನ ಕಡೆಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅವರಿಂದ ನಾವು... ನಮ್ಮಿಂದ ಅವರಲ್ಲ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಅಷ್ಟು ಒಳ್ಳೆಯ ವ್ಯಕ್ತಿ.
ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತಾರೆ ಈ ದಿನವೆಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನವನ್ನು ಓದುವುದಕ್ಕಾಗಿ ಮುಡಿಬಿಟ್ಟರು. ಆ ದಿನದಂದು ಶಿಕ್ಷಕರಿಗೆ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ ಈ ದಿನದಂದು ನನ್ನ ಕಡೆಯಿಂದ ಆ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅವರು ಶಿಕ್ಷಕರ ಅಲ್ಲದೆ ಹೆತ್ತ ಮಕ್ಕಳಿನಂತೆ ನೋಡಿಕೊಳ್ಳುವ ಎಲ್ಲರೂ ನನ್ನ ತಂದೆ ತಾಯಿಗಳು. ಮುಂದೆ ಒಂದು ದಿನ ನಾನು ನಿಮ್ಮಂತೆ ಆಗಲು ಬಯಸುತ್ತೇನೆ.
ಪ್ರಿಯಾಂಕ ಪಿ, ದ್ವಿತೀಯ ಬಿ.ಕಾಂ, ‘ಸಿ’ ವಿಭಾಗ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ
ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ ಕೇವಲ ಗುರುಗಳಿಗೆ ಮಾತ್ರ ಇರುತ್ತದೆ. ಕಾಲಕಾಲದಿಂದಲೂ ಗುರುಗಳ ಸ್ಥಾನ ಎಲ್ಲರಿಗಿಂತಲೂ ಮೇಲು ಮತ್ತು ಶ್ರೇಷ್ಠವಾದದ್ದು. ಎಲ್ಲರೂ ಹಲವಾರು ಕ್ಷೇತ್ರದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಅದಕ್ಕೆ ಬುನಾದಿ ಹಾಕುವುದು ಶಿಕ್ಷಕರು. ನಮ್ಮ ತಂದೆ ತಾಯಿ ಮೊದಲ ಗುರುಗಳು. ನಂತರ ಜೀವನದಲ್ಲಿ ಹಲವಾರು ಗುರುಗಳ ಪರಿಚಯ ನಮ್ಮೆಲ್ಲರಿಗೂ ಸಹ ಆಗುತ್ತದೆ ಆದರೆ ಅದರಲ್ಲಿ ಕೆಲವರು ಮಾತ್ರ ತಂದೆ-ತಾಯಿ ಸಮಾನರಾಗಿ ಬಿಡುತ್ತಾರೆ. ನನ್ನ ಜೀವನದಲ್ಲೂ ಕೂಡ ತಂದೆ ಸಮಾನರಾಗಿ ಇಂದಿಗೂ ನನ್ನ ಬೆನ್ನೆಲುಬಾಗಿ ನಿಂತಿರುವ ನನ್ನ ದೊಡ್ಡ ಶಕ್ತಿ ನನ್ನ ಶಿಕ್ಷಕರಾದ ವಿಶ್ವನಾಥ ಸರ್.
ನನ್ನ ಊರು ಚಿತ್ರದುರ್ಗ. ಈ ಊರಿನ ಹೆಸರು ಕೇಳಿದೊಡನೆ ನೆನಪಾಗುವುದು ನಮ್ಮ ಚಾಮಯ್ಯ ಮೇಷ್ಟ್ರು. ಇಂದಿಗೂ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತಿಯಾಗಿರುವ ನನ್ನ ಗುರುಗಳು ವಿಶ್ವನಾಥ ಸರ್. ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರು. ನಾನು ಪಿಯುಸಿ ಓದುವಾಗ ನನಗೆ ಆಂಗ್ಲ ಶಿಕ್ಷಕರಾಗಿ ಪರಿಚಯವಾದ ಇವರು ಇಂದಿಗೂ ನನ್ನ ದಾದನಾಗಿ ಉಳಿದಿದ್ದಾರೆ. ಆಂಗ್ಲ ಶಿಕ್ಷಕರಾದರೂ ಕನ್ನಡ ಭಾಷೆಯ ಮೇಲೆ ಹುಚ್ಚು ಪ್ರೀತಿ. ಎಲ್ಲರ ಜೊತೆಗೆ ತುಂಬಾ ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು. ನಾನು ಮೊದಲ ಬಾರಿಗೆ ಕಂಡ ಏಕೈಕ ಗುರುಗಳು ಎಲ್ಲಾ ವಿದ್ಯಾರ್ಥಿಗಳಿಂದ ಅಣ್ಣ ಎಂದೇ ಕರೆಸಿಕೊಂಡು ಖುಷಿ ಪಡುವ ಶಿಕ್ಷಕ . ಇವರು ಪುಸ್ತಕದ ಪಾಠದಿಂದ ಹಿಡಿದು ಜೀವನದ ಪಾಠದ ತನಕ ಮನ ಮುಟ್ಟುವ ರೀತಿ ಸರಾಗವಾಗಿ ಸಾರುತ್ತಿದ್ದರು. ಪ್ರತಿಯೊಬ್ಬರನ್ನು ತಮ್ಮ ಮನೆ ಮಕ್ಕಳ ರೀತಿ ನೋಡಿಕೊಳ್ಳುತ್ತಿದ್ದರು ಅವರಿಲ್ಲದೆ ಕಾರ್ಯಕ್ರಮವೆಲ್ಲವೂ ಅಪೂರ್ಣ. ಇಡೀ ಕಾಲೇಜು ತುಂಬ ಅವರ ಅಭಿಮಾನಿಗಳು.
ಪ್ರತಿವರ್ಷ ರಕ್ಷಾ ಬಂಧನದ ಸಮಯದಲ್ಲಿ ವಿದ್ಯಾರ್ಥಿನಿಯರು ಚಾಮಯ್ಯ ಮೇಷ್ಟ್ರಿಗೆ ರಾಖಿಯನ್ನು ಕಟ್ಟುತ್ತಿದ್ದರು. ಇದು ಸಹ ನಾನು ಮೊದಲ ಬಾರಿಗೆ ಕಂಡದ್ದು. ತುಂಬಾ ಕಡಿಮೆ ಸಮಯದಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾದ ಏಕೈಕ ಶಿಕ್ಷಕ ಇವರು. ಪರೀಕ್ಷ ಸಮಯದಲ್ಲಿ ಬೇರೆ ಕಾಲೇಜಿನಲ್ಲಿ ನಾವು ಬರೆಯುವ ಹೊತ್ತಿಗೂ ಕೂಡ ಎಲ್ಲರಿಗೂ ಶುಭ ಹಾರೈಸಲು ಪ್ರತಿದಿನ ಬರುತ್ತಿದ್ದರು. ಈ ರೀತಿ ಕಾಳಜಿ ತೋರುವ ಶಿಕ್ಷಕರ ಬಗ್ಗೆ ಬರೆಯಲು ನನಗೆ ಹೆಮ್ಮೆ. ವರ್ಣನೆಗೆ ಸಿಗದ ವ್ಯಕ್ತಿತ್ವ ಇವರದು. ನನ್ನ ಜೀವನದಲ್ಲಿ ತುಂಬಾ ಮಹತ್ವ ಹೊಂದಿರುವ ವ್ಯಕ್ತಿ. ನಾನು ಪ್ರತಿಯೊಂದು ಹೆಜ್ಜೆ ಇಡುವ ಮುನ್ನ ತಿರುಗಿ ನೋಡುವಾಗ ನೆರಳಾಗಿರುವ ಇವರು ನನ್ನ ಜೀವನದಲ್ಲಿ ತಂದೆಯ ಸ್ಥಾನವನ್ನು ಎಂದಿಗೂ ತುಂಬಿದ್ದಾರೆ. ನಾನು ಕುಗ್ಗಿದಾಗ ಜೊತೆಯಾಗಿ ನಿಂತು ಹಿಗ್ಗಿದಾಗ ತಾನು ಮನಸ್ಸಾರೆ ಸಂತೋಷ ಪಡುತ್ತಿದ್ದ ಇಂತಹ ಶಿಕ್ಷಕರ ಬಗ್ಗೆ ಎಷ್ಟು ಹೇಳಿದರು ಕಡಿಮೆ.
ಕಟ್ಟಡ ನಿರ್ಮಿಸುವಾಗ ಮೊದಲ ನಾಲ್ಕು ಸ್ತಂಭಗಳು ಗಟ್ಟಿಯಾಗಿರಬೇಕು. ಹಾಗೆಯೇ ನನ್ನ ಜೀವನದಲ್ಲಿ ಅಪ್ಪ ಅಮ್ಮ ಅಕ್ಕ ಮತ್ತು ದಾದಾ ಅಂದರೆ ಈ ನನ್ನ ಶಿಕ್ಷಕರು ನಾಲ್ಕು ಸ್ತಂಭಗಳಾಗಿ ನಿಂತಿದ್ದಾರೆ. ಇದರಲ್ಲಿ ಯಾವುದೇ ಒಂದು ಇಲ್ಲದಿದ್ದರೂ ಸುಂದರ ಕಟ್ಟಡದಂತಹ ನನ್ನ ಜೀವನ ನೆಲಸಮ ಎಂಬುದು ನನ್ನ ಭಾವನೆ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂದು ಹೇಳುವ ರೀತಿ ನಮ್ಮ ಗುರಿಗೆ ಬೆನ್ನೆಲುಬಾಗಿ ನಿಂತಿರುವ ಗುರುಗಳು ಇದ್ದರೆ ನಾವು ಜೀವನದಲ್ಲಿ ಎತ್ತರದ ಸ್ಥಾನವನ್ನು ಮುಟ್ಟುತ್ತೇವೆ.
ಎಲ್ಲರ ಜೀವನದಲ್ಲಿ ಒಬ್ಬರಲ್ಲ ಒಬ್ಬರು ಗುರುಗಳು ಇದ್ದೇ ಇರುತ್ತಾರೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿರುವ ವ್ಯಕ್ತಿಗಳು ಅವರು ನಮ್ಮ ಜೀವನದಲ್ಲಿ ತುಂಬಾ ಪರಿಣಾಮ ಬೀರಿ ನೆರಳಾಗಿ ಇರುವವರು. ಆದರೆ ಬೇಸರದ ಸಂಗತಿ ಎಂದರೆ ಇತ್ತೀಚಿನ ಕಾಲದಲ್ಲಿ ಶಿಕ್ಷಕರಿಗೆ ಗೌರವ ಸಿಗುವುದು ಮತ್ತು ಕೊಡುವುದು ಎರಡು ಕೂಡ ಕಡಿಮೆಯಾಗಿದೆ, ವಿದ್ಯಾರ್ಥಿಗಳಲ್ಲಿ ಗುರುಗಳ ಬಗ್ಗೆ ಇರಬೇಕಾದ ಭಯ ಭಕ್ತಿ ಮತ್ತು ಗೌರವ ಕೊಡುವ ಸೌಜನ್ಯ ಇಂದಿಗೆ ಕಾಣೆಯಾಗಿದೆ. ನಮ್ಮೆಲ್ಲರ ಜೀವನದ ಬುನಾದಿ ಅವರು. ಅವರಿಗೆ ಸಿಗಬೇಕಾದ ಗೌರವ ಎಲ್ಲರಿಗಿಂತ ಹೆಚ್ಚಾಗಿರಬೇಕು. ಅಂಧಕಾರದ ಜೀವನದಲ್ಲಿ ಬೆಳಕು ಮೂಡಿಸುವ ವ್ಯಕ್ತಿ ಹಾಗೂ ವ್ಯಕ್ತಿತ್ವಕ್ಕೆ ನಮ್ಮೆಲ್ಲರ ಹೃದಯಪೂರ್ವ ನಮನಗಳನ್ನು ಸಲ್ಲಿಸೋಣ.
ಅರ್ಪಿತ, ಅಂತಿಮ ಬಿ.ಬಿ.ಎ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ
ಜೀವನ ಎಂಬ ವಿಶಾಲ ನೌಕೆಯಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ತುಂಬಾ ದಾರಿಗಳಿವೆ ಆದರೆ ಅದರಲ್ಲಿ ನಾವು ಎಷ್ಟು ನಮ್ಮ ಮುಂದಿನ ಭವಿಷ್ಯ ಗೆ ಅಳವಡಿಸಿಕೊಳ್ಳುತ್ತೇವೆ ಎಂಬುದು ತುಂಬಾ ಮುಖ್ಯ . ನಮ್ಮ ಗುರಿ ಸಾಧಿಸಲು ನಾವು ಇಡುವ ಪ್ರತಿಯೊಂದು ಹೆಜ್ಜೆಯು ತುಂಬಾ ಅತ್ಯಮೂಲ್ಯವಾದದು ಮತ್ತು ಅದರ ಜೊತೆ ನಾವು ಗುರಿ ಸಾಧಿಸಲು ನಮ್ಮ ಜೊತೆ ಇರುವ ಗುರುವು ಕೂಡ ತುಂಬಾ ಮುಖ್ಯವಾದ ಪಾತ್ರವನ್ನ ವಹಿಸುತ್ತಾರೆ. ಗುರು ಎಂದು ತಕ್ಷಣ ಬರಿ ಶಾಲಾ-ಕಾಲೇಜಿನಲ್ಲಿ ಪಾಠ ಮಾಡುವವರು ಮಾತ್ರವಲ್ಲ, ನಾವು ಇಡುವ ಪತಿ ಹೆಜ್ಜೆಯಲ್ಲಿಯೂ ತಪ್ಪಿದ್ದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಸುವವರು ಕೂಡ ಗುರುವೇ. ನಾವು ಅವರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.
‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ’ ಎಂದರೆ ನಮ್ಮ ಜೀವನದ ಸರಿ ತಪ್ಪುತಿದ್ದಿ, ಬುದ್ಧಿ ಹೇಳುವ ಎಲ್ಲರೂ ನಮಗೆ ದೇವರ ಸಮ. ನಾವು ಅವರನ್ನು ಪ್ರತಿದಿನ ಪ್ರತಿಕ್ಷಣ ಸ್ಮರಿಸುತ್ತಾ ನಮ್ಮ ಬದುಕನ್ನು ನಡೆಸಿದರೆ ನಮ್ಮ ಬದುಕು ಸುಖ ಸಂತೋಷದಿಂದ ಕೂಡಿರುತ್ತದೆ. ಅದೇ ತರಹದಲ್ಲಿ ನನ್ನ ಜೀವನದಲ್ಲಿ ಕೂಡ ಗುರು ಅಥವಾ ಶಿಕ್ಷಕರು ನನ್ನ ಗುರಿಗಳ ಕಡೆಗೆ ಪ್ರೋತ್ಸಾಹಿಸಿದ್ದಾರೆ. ಅವರ ಬಗ್ಗೆ ಬರೆಯುತ್ತಿರುವುದರ ಬಗ್ಗೆ ನನಗೆ ತುಂಬಾ ಖುಷಿಯಿದೆ.
ನನ್ನ ನೆಚ್ಚಿನ ಗುರುಗಳೆಂದರೆ ನಮ್ಮ ಪಿಯುಸಿಯಲ್ಲಿನ ಮಂಜುನಾಥ್ ಸರ್. ಇವರು ವಿಕಾಸ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರು ನಮಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಕೌಂಟೆನ್ಸಿ ಎಂಬ ವಿಷಯವನ್ನು ನಮಗೆ ಕಲಿಸುತ್ತಿದ್ದರು.
ಮಂಜುನಾಥ್ ಸರ್ ಇವರು ತುಂಬಾ ಅಮೂಲ್ಯವಾದ ಮುತ್ತು ಇದ್ದಂತೆ. ನಮ್ಮ ವಿಕಾಸ ಪದವಿ ಪೂರ್ವ ಕಾಲೇಜಿಗೆ ಇವರು ಮಾಡುವ ಪಾಠದ ಬಗ್ಗೆ ಹೇಳುವುದೇ ಬೇಡ. ಏಕೆಂದರೆ ಪಾಠ ಮಾಡಲು ಬಂದರೆ ಯಾರಿಗೂ ಅರ್ಥವಾಗಲಿಲ್ಲ ಎಂಬ ಪ್ರಶ್ನೆಯೇ ಇಲ್ಲ. ಅಷ್ಟು ಅಚ್ಚುಕಟ್ಟಾಗಿ ಪಾಠವನ್ನು ಮಾಡುತ್ತಾ ಇದ್ದರು. ನಮಗೆ ಅರ್ಥ ಆಗದಿರುವ ಸಂದರ್ಭದಲ್ಲಿ ಎಲ್ಲರ ಬಳಿ ಬಂದು ಪ್ರತಿಸಲ ಯಾವುದೇ ಬೇಜಾರಿಲ್ಲದೆ ಮತ್ತೊಮ್ಮೆ ಹೇಳಿ ಕೊಡುತ್ತಿದ್ದರು.
ಇವರು ಬರಿ ಪಾಠ ಅಷ್ಟೇ ಅಲ್ಲ, ನಮ್ಮ ಜೀವನ ಹಾಗೂ ನಮ್ಮ ನಡವಳಿಕೆಯ ಬಗ್ಗೆ ಕೂಡ ತಿಳಿಸಿಕೊಡುತ್ತಿದ್ದರು. ಅವರ ಒಂದೊಂದು ಮಾತು ಕೂಡ ನಮ್ಮ ಜೀವನ ನಮ್ಮ ಶಿಕ್ಷಣ ಎಲ್ಲಾ ವಿಷಯದಲ್ಲೂ ಪರಿಣಾಮ ಬೀರುತ್ತಿತ್ತು. ಅವರು ತಮ್ಮ ಜೀವನದಲ್ಲಿ ಅನುಭವಿಸಿರುವ ಕೆಲವು ಘಟನೆ ಮತ್ತು ಅದು ಹೇಗೆ ಅವರಿಗೆ ಅಡ್ಡಿ ಉಂಟು ಮಾಡಿತು ಮತ್ತು ಅವುಗಳಿಂದ ಅವರು ಹೇಗೆ ಹೊರಬಂದರು ಎಂಬ ಸಣ್ಣ ಸಣ್ಣ ವಿಷಯದಿಂದ ಹಿಡಿದು ಪ್ರತಿ ಕ್ಷಣ ನಾವು ಹೇಗಿರಬೇಕು ಯಾರ ಜೊತೆ ಹೇಗೆ ಮಾತನಾಡಬೇಕು ಮತ್ತು ನಮ್ಮ ಜೀವನದಲ್ಲಿ ನಮ್ಮ ಪಾತ್ರ ಬಹಳ ಮುಖ್ಯ ಎಂಬ ನೀತಿ ಪಾಠವನ್ನು ಹೇಳಿಕೊಟ್ಟು ನಮ್ಮ ತಪ್ಪುಗಳನ್ನು ತಿದ್ದಿದ್ದಾರೆ ಈ ನಮ್ಮ ಗುರುಗಳು.
ಮಂಜುನಾಥ್ ಸರ್ ಇವರು ನಮ್ಮ ಕಾಲೇಜಿನ ಕೀರ್ತಿ ಇದ್ದಂತೆ. ಇವರು ಪ್ರತಿದಿನ ಪ್ರತಿ ಕ್ಷಣ ಬೇರೆಯವರ ಬಗ್ಗೆ ಕಾಳಜಿ ತೋರಿಸುತ್ತಿದ್ದರು. ಬದುಕಿನ ಮುಂದಿನ ಗತಿಗಳ ಬಗ್ಗೆ ವಿವರಿಸುತ್ತಾ ನಮ್ಮನ್ನು ಯಾವಾಗಲೂ ಎಚ್ಚರಗೊಳಿಸುತ್ತಿದ್ದರು. ನಮ್ಮ ಬದುಕು ಎಂಬ ಸುಂದರ ಸಮುದ್ರದಲ್ಲಿ ನಾವು ದಡ ಸೇರಬೇಕೆಂದರೆ ಅದು ಕೇವಲ ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮನ್ನು ತಿದ್ದಿ ನಡೆಸುವ ಗುರುಗಳಿಂದ ಮಾತ್ರವೇ ಸಾಧ್ಯ. ಗುರಿ ಮುಂದಿದ್ದರೆ ಗುರು ಹಿಂದಿರಬೇಕು. ನಾವು ಬರೀ ನಮ್ಮ ಸ್ವಂತ ನಿರ್ಧಾರದಿಂದ ಒಬ್ಬರೇ ಗುರಿಯನ್ನು ಮುಟ್ಟುತ್ತೇವೆ ಎಂದರೆ ಅದು ಅಸಾಧ್ಯ ನಾವು ನಮ್ಮ ನಿಜವಾದ ಗುರಿಯನ್ನ ತಲುಪುತ್ತೇವೆ ಎಂದರೆ ನಮ್ಮ ಹಿಂದೆ ಅಂದರೆ ನಮಗೆ ನಮ್ಮ ಗುರಿಗೆ ಬೆನ್ನೆಲುಬಾಗಿ ನಿಲ್ಲುವ ಗುರು ಮತ್ತು ಗುರುವಿನ ಸ್ಥಾನ ತುಂಬಿದವರಿಂದಲೇ ಸಾಧ್ಯ.
ನಮ್ಮ ಮಂಜುನಾಥ್ ಸರ್ ಅವರು ಸಹ ಅದೇ ರೀತಿಯ ಮನುಷ್ಯ. ಅವರು ತಮ್ಮ ವಿದ್ಯಾರ್ಥಿಗಳನ್ನು ಯಾವಾಗಲೂ ತಮ್ಮ ಮಕ್ಕಳ ತರ ಕಾಣುತ್ತಾರೆ. ತಮ್ಮ ವಿದ್ಯಾರ್ಥಿಗಳಿಗೆ ಸಮಸ್ಯೆಯಾದ ತಕ್ಷಣ ಅವರ ಮುಂದೆ ಬಂದು ಕೈ ಚಾಚಿ ಸಹಾಯ ಮಾಡಿ ಪ್ರೇರೇಪಿಸಿ ಮೇಲೆತ್ತುವ ಕೆಲಸವನ್ನು ಮಾಡುತ್ತಾರೆ. ತಮ್ಮ ಜೀವನದ ಉದಾಹರಣೆ ಮತ್ತು ಇನ್ನು ಕೆಲವು ನಮ್ಮ ಜೀವನದ ಮೇಲೆ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುವಂತಹ ಮಾತು ಮತ್ತು ಉದಾಹರಣೆ ನೀಡಿ ಅದಕ್ಕೂ ಸಹ ಒಂದಲ್ಲ ಒಂದು ರೀತಿಯಿಂದ ಸಮಸ್ಯೆಯಿಂದ ಹೊರಬರಲು ದಾರಿಯನ್ನು ಸಹ ಸೂಚಿಸುತ್ತಾರೆ.
ಮಂಜುನಾಥ ಸರ್ ಅವರು ಬರೀ ನಮಗೆ ಪಾಠ ಹೇಳಿಕೊಟ್ಟ ಗುರುಗಳಲ್ಲ. ನಮ್ಮ ಜೀವನದಲ್ಲಿ ಒಂದು ಭಾಗವಾಗಿ ಜೀವನ ಪೂರ್ತಿ ಕಲಿಯುವಂತಹ ಪಾಠಗಳಿಗೆ ಇವರು ಒಂದು ಸ್ತಂಭವಿದ್ದಂತೆ. ಇವರ ಪ್ರತಿ ಮಾತಿನಿಂದ ಪ್ರೇರೇಪಿತಳಾದ ನಾನು ಈಗ ನನ್ನ ಹೊಸತನವನ್ನು ಕಂಡುಕೊಳ್ಳುತ್ತಿದ್ದೇನೆ. ಗುರು ಎಂದರೆ ಬರೀ ಪಠ್ಯಪುಸ್ತಕದಲ್ಲಿ ಇರುವ ಹತ್ತಾರು ಪಾಠ ಹೇಳಿ ಹೋದವರಲ್ಲ. ಅದರ ಜೊತೆ ನಮ್ಮ ಅಂದರೆ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಲು ಪಣತೊಡುವ ವ್ಯಕ್ತಿಯೂ ಕೂಡ. ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಭಾಗವಾಗಿ ಅವರು ನಮ್ಮ ಪೂರ್ತಿ ಜೀವನದಲ್ಲಿ ಇರುತ್ತಾರೆ. ಗುರು ಎಂದರೆ ತಂದೆ ತಾಯಿಯ ಇನ್ನೊಂದು ರೂಪವಿದ್ದಂತೆ ಮತ್ತು ದೈವದ ಪ್ರತಿರೂಪವೂ ಹೌದು. ಬದುಕು ಎಂಬ ದೋಣಿಯಲ್ಲಿ ಗುರು ನಾವಿಕನಿದ್ದಂತೆ.
ಕೃತಿಕಾ, ಪ್ರಥಮ ಬಿ.ಬಿ.ಎ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ