ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ಲೇಖನಗಳು

famous personalities history

Posted on 06-09-2025 |

Share: Facebook | X | Whatsapp | Instagram


ಶಿಕ್ಷಕರ ದಿನಾಚರಣೆ ಪ್ರಯುಕ್ತ  ವಿಶೇಷ ಲೇಖನಗಳು

ನಮ್ಮ ಮೇಲೆ ತಂದೆಯ ಪ್ರೀತಿ ತೋರಿದ ಗಂಗಾಧರ ಸ್ವಾಮಿ ಸರ್ 

 “ಗುರುಗಳು” ಕೇಳೋಕೆ ಎಷ್ಟು ಖುಷಿಯಾಗುವಂತಹ ಪದ ಅಲ್ವಾ. 

    ನಮ್ಮ ಸಾಧನೆಯನ್ನು ನೋಡಿ ಮತ್ತು ನಮ್ಮ ಸಂತೋಷವನ್ನು ನೋಡಿ ತಾವು ಸಂತೋಷ ಪಡುವ ಜೀವಗಳೆಂದರೆ ಅಪ್ಪ ಅಮ್ಮ ಮತ್ತು ಗುರುಗಳು ಅಥವಾ  ಶಿಕ್ಷಕರು.  ವಿದ್ಯಾರ್ಥಿ ಎಂಬ ಕಲ್ಲನ್ನು ಒಂದು ಸುಂದರವಾದ ಮೂರ್ತಿಯನ್ನಾಗಿಸಲು ಶಿಕ್ಷಕ ಎಂಬ ಶಿಲ್ಪಿಯು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾನೆ. 

    ನಾವು  ಸೋತಾಗ ಮೊದಲು ಬಂದು ಎತ್ತುತ್ತಾಳೆ, ಸ್ಪೂರ್ತಿ ತುಂಬುತ್ತಾಳೆ, ಗೆದ್ದಾಗ ಯಾವುದೋ ಒಂದು ಮೂಲೆಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾಳೆ. ನಮಗೋಸ್ಕರ ದೊಡ್ಡ ಕನಸನ್ನ ಕಟ್ಟಿಕೊಂಡು ನನಸು ಮಾಡಲು ತನ್ನೆಲ್ಲಾ ಪ್ರಯತ್ನವನ್ನು  ಹಾಕಿ ಕಾಯುತ್ತಾಳೆ. ಮನೆಯೆ ಮೊದಲ ಪಾಠಶಾಲೆ,  ತಾಯಿಯೇ ಮೊದಲ ಗುರು’ ಎನ್ನುವ ಹಾಗೆ ಪ್ರತಿದಿನ ಸ್ಪೂರ್ತಿ ತುಂಬುವ  ನನ್ನ ತಾಯಿ ನನ್ನ ಮೊದಲ ಮೆಚ್ಚಿನ ಶಿಕ್ಷಕಿ. 

    ನಾನು ಸಣ್ಣವಳಿದ್ದಾಗ ತುಂಬಾ ದಡ್ಡಿ ಯಾಗಿದ್ದೆ.  ಅಂದ್ರೆ ನನ್ನ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತಿರಲಿಲ್ಲ.  ಮೊದಲು ನನ್ನ ವ್ಯಾಸಂಗ ಶುರುವಾಗಿದ್ದು ನಮ್ಮೂರಿನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ.  ನಾನು ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಓದಬೇಕು ಅನ್ನೋ ಗುರಿನೇ ನನಗೆ ಇರಲಿಲ್ಲ.  ಈ ಕಾರಣಕ್ಕೆ ನನ್ನ ಅಮ್ಮ ನನ್ನ ಪಕ್ಕದ ಊರಿನ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದರು.  ಆ ಶಾಲೆಗೆ ಸೇರಿಸಲು ಹೋದಾಗ ಶಾಲೆಯವರು ನನ್ನನ್ನು ಸೇರಿಸಿಕೊಳ್ಳಲೇ ಇಲ್ಲ.  ಪಾಪ ಎ ಬಿ ಸಿ ಡಿನೇ ಬರದೇ ಇರೋ ಹುಡುಗೀನ  ಎರಡನೇ ತರಗತಿಗೆ ಹೇಗೆ ತಾನೇ ಸೇರಿಸಿಕೊಳ್ಳಬೇಕು ನೀವೇ ಹೇಳಿ! ಹೇಗೋ ಕಷ್ಟ ಪಟ್ಟು ನಮ್ಮಮ್ಮ ನನಗೆ ಕಲಿಸಿ ಶಾಲೆಗೂ ಸೇರಿಸಿದಳು. ಸೇರ್ಕೊಂಡ ಆಮೇಲೆ ಶುರುವಾಯಿತು ನಿಜವಾದ ರೋಧನೆ, ನಿಜವಾದ ಜೀವನ.

     ಅಲ್ಲಿರುವ ಶಿಕ್ಷಕರು ಏನು ಪಾಠ ಮಾಡ್ತಿದ್ದಾರೆ ಅನ್ನೋದೇ ಅರ್ಥ ಆಗ್ತಿರಲಿಲ್ಲ.  ಯಾವುದೋ ಪುಸ್ತಕ ಕೇಳಿದರೆ ಇನ್ಯಾವುದೋ ಕೊಡುತ್ತಿದ್ದೆ.  ನನಗೆ ಭಯ.  ಆಸಕ್ತಿಯೇ ಇರಲಿಲ್ಲ.  ಹೀಗೆ ಒಂದು ದಿನ ತರಗತಿಯಿಂದ ಹೊರಗಡೆ ನನ್ನನ್ನು ನಿಲ್ಲಿಸಿದ್ರು.  ಅದೇ ಸಮಯಕ್ಕೆ ನಮ್ಮಮ್ಮ ಶಾಲೆಗೆ ಬಂದು ನಾನು ಹೊರಗಡೆ ನಿಂತಿರುವುದನ್ನ ನೋಡಿ ತುಂಬಾ ದುಃಖ ಪಟ್ಟಳು.  ಶಿಕ್ಷಕರನ್ನೆಲ್ಲ ಕಾರಣ ಕೇಳಿದರೆ ನಾವು ಇವಲನ್ನು ಯಾಕಾದರೂ ಸೇರಿಸಿಕೊಂಡೆವು  ಅನ್ನೋ ರೀತಿಯಲ್ಲಿ ಮಾತನಾಡಿದರು. ನಮ್ಮಮ್ಮನಿಗೆ ತುಂಬಾ ಅವಮಾನ ಆಯ್ತು.  ಅದು ನಂಗೆ ಅರ್ಥ ಆಯ್ತು.  ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಸಮಾಧಾನವಾಗಿ ಎಲ್ಲಾ ಹೇಳುವುದಕ್ಕೆ ಶುರು ಮಾಡಿದರು.

    ಜೀವನ ಎಂದರೇನು ಅದ್ರಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯ ಎಂದು ಹೇಳಿ ಅಳೋಕೆ ಶುರು ಮಾಡಿದಳು. ನಾನು ಮೊದಲನೇ ಬಾರಿ ನಮ್ಮ ಅಮ್ಮನ ಕಣ್ಣಲ್ಲಿ ನೀರನ್ನು ನೋಡಿದ್ದು.  ಅದು ನನ್ನಿಂದ ಅಂತ ಯೋಚನೆ ಮಾಡಿದ್ರೆ ತುಂಬಾ ಬೇಜಾರಾಗುತ್ತೆ.  ಆ ಘಟನೆ ಈಗಲೂ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ.  ನಂತರ ನಾನು ಊಟಕ್ಕೆ ಶುರು ಮಾಡಿದೆ.  ನಮ್ಮಮ್ಮ ತನ್ನೆಲ್ಲ ಕೆಲಸ ಚಿಂತೆಗಳನ್ನ ಬಿಟ್ಟು ನನ್ನ ಜೊತೆ ಓದಕ್ಕೆ ಶುರು ಮಾಡಿದಳು. ಅವತ್ತಿನಿಂದ ಇನ್ನೊಂದು ಸಲ ನಮ್ಮ ಅಮ್ಮನಿಗೆ ಯಾರ ಮುಂದೆನೋ ಅವಮಾನ ಆಗಬಾರದು ಅಂತಾನೇ ಕಷ್ಟಪಟ್ಟು ಓದಿದೆ.  ಅದೇ ವರ್ಷ ಅದೇ ಎರಡನೇ ತರಗತಿಯಲ್ಲಿ ಏನೂ ಬರದ ನಾನು ತರಗತಿಗೆ ಮೊದಲ ಸ್ಥಾನವನ್ನು ಪಡೆದೆ. ನನ್ನ ಜೀವನದ ದಾರಿದೀಪ ನನ್ನ ಅಮ್ಮ.  ನನ್ನ ಮೊದಲ ಸ್ಪೂರ್ತಿ ನನ್ನ ಅಮ್ಮ. ನನ್ನ ಬಲ ನನ್ನಮ್ಮ. ಅವಳ ಋಣವೇ ನಾನು ಎಷ್ಟು ಜನ್ಮ ಹುಟ್ಟಿ ಬಂದರೂ ತೀರಿಸಲು ಸಾಧ್ಯವಿಲ್ಲ.  ಸದಾ ಕಾಲ ಅವಳಿಗೆ ಋಣಿಯಾಗಿ ಅವಳ ಸಂತೋಷಕ್ಕೆ ಕಾರಣರಾಗಿರಲು ಬಯಸುತ್ತೇನೆ. 

    ಈಗ ನಾನು ಹೇಳೋಕೆ ಹೊರಟಿರುವುದೇ ನನ್ನ ಎಂಟನೇ ತರಗತಿಯ ಘಟನೆ. ನಾನು ಎಂಟನೇ ತರಗತಿಯಲ್ಲಿ ಹಾಸ್ಟೆಲ್ ನಲ್ಲಿ ಇದ್ದೆ, ನನ್ನ ಗೆಳತಿಯೊಬ್ಬಳಿಗೆ  ಜ್ವರ ತುಂಬಾ ಜೋರಾಗಿತ್ತು ಚಳಿಗೆ ಅವಳ ಮೆದುಳು ಅವಳ ಹಿಡಿತಕ್ಕೆ ಸಿಗುತ್ತಿರಲಿಲ್ಲ.  ಒಂದೇ ಸಾರಿಗೆ ಎದ್ದು ಅಪ್ಪ ಅಪ್ಪ ಎಂದು ಕೂಗೋಕೆ  ಶುರು ಮಾಡಿದಳು. ಏನಪ್ಪಾ ಇದು ಹೀಗೆ ಕೂಗುತ್ತಿದ್ದಾಳೆ, ರಾತ್ರಿ ಬೇರೆ ಅಂತ ನಾವೆಲ್ಲರೂ ಗಾಬರಿ ಆದೆವು. ಅಪ್ಪ ಅಂದಿದ್ದಕ್ಕೆ ಅವಳ ಅಪ್ಪನಿಗೆ ಫೋನ್ ಮಾಡಿದ್ದಾಯಿತು. ಆದರೆ ಅವಳು ಮಾತನಾಡಲೇ ಇಲ್ಲ. ಮತ್ತೆ ಅಪ್ಪ ಅಪ್ಪ ಎಂದು ಕೂಗಿದ್ಲು ನಾವು ತಕ್ಷಣ ನಮ್ಮ ಪ್ರಾಂಶುಪಾಲರಿಗೆ ಹೇಳಿದೆವು. ಅವಳ ಮನೆಗೆ ಹಾಸ್ಟೆಲ್ ಇಂದ ಸುಮಾರು 5 ಕಿಲೋಮೀಟರು. ಅವರು ರಾತ್ರಿ 10 ಗಂಟೆಗೆ ಮನೆಯಿಂದ ಬಂದರು.  ಅವರನ್ನು ನೋಡಿದ ತಕ್ಷಣವೇ ನನ್ನ ಗೆಳತಿ ಅಪ್ಪ ಎಂದು ಹೋಗಿ ಅವರನ್ನು ತಬ್ಬಿಕೊಂಡು ಅಳೋಕೆ ಶುರು ಮಾಡಿದಳು. ನಮ್ಮ ಪ್ರಾಂಶುಪಾಲರು ಅವಳನ್ನು ಸಮಾಧಾನ ಮಾಡಿ ಊಟ ಮಾಡಿಸಿ ಅವಳಿಗೆ ನಿದ್ದೆ ಹತ್ತುವರೆಗೂ ಇದ್ದು ನಂತರ ಮನೆಗೆ ಹೋದರು.  ಅವರೇ ನನ್ನ ಎರಡನೇ ಮೆಚ್ಚಿನ ಶಿಕ್ಷಕ ಗಂಗಾಧರ ಸ್ವಾಮಿ ಸರ್. 

    ಅವರ ಮಿಂಚಿನಂತಹ ಕಣ್ಣುಗಳು.  ಸ್ವಲ್ಪ ಸಿಟ್ಟಿನಲ್ಲಿರುವ ಹುಬ್ಬುಗಳು. ವಿದ್ಯಾರ್ಥಿಗಳಿಗೋಸ್ಕರ ತುಟಿಯಲ್ಲಿ ಸಣ್ಣದಾದ ನಗು, ಮನಸ್ಸಿನಲ್ಲಿ ಒಂದು ಮುಗ್ದತೆ.  ತಲೆಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಚಿಂತನೆ.. ಇವೆಲ್ಲವು ಅವರು ನನಗೆ ಮೆಚ್ಚಿನ ಶಿಕ್ಷಕ ಆಗಲು ಕಾರಣವಾದವು. ಅಷ್ಟೇ ಅಲ್ಲ ಮುಂದೆ ಹೇಳ್ತೀನಿ ಕೇಳಿ. 

    ನಾನು 10ನೇ ತರಗತಿಯಲ್ಲಿದ್ದೆ.  ನಮ್ಮ ಗಂಗಾಧರ ಸ್ವಾಮಿ ಸರ್ ನಮಗೆ ಗಣಿತ ವಿಷಯವನ್ನು ಪಾಠ ಮಾಡಿದರು.  ಬೆಳಿಗ್ಗೆ ನಮಗೋಸ್ಕರ ನಾವೇ ಏಳೋಕೆ ಕಷ್ಟಪಡುವ ಸಮಯದಲ್ಲಿ ನಮ್ಮ ಸರ್ ಮನೆಯ ಎಲ್ಲಾ ಕೆಲಸವನ್ನು ಮುಗಿಸಿ ಐದು ಮೂವತ್ತಕ್ಕೆ ಬರೋರು.  ಇಂತಹ ಶಿಕ್ಷಕರನ್ನು ಪಡೆದ ನಾನೇ ಭಾಗ್ಯವಂತಳು.  ನಮ್ಮ ಕೈಯಲ್ಲಿ ಟೊಮೊಟೊ ಹಣ್ಣಿನ ಬಣ್ಣಕ್ಕೆ ಬರುವರೆಗೂ ಹೊಡೆಯುವುದು.  ಸುಳ್ಳು ಹೇಳಿದರೆ ಎಂತಹ ಹೊಡಿತಿದ್ರು ಅಂದ್ರೆ ಇವತ್ತಿಗೂ ಸುಳ್ಳು ಹೇಳಬೇಕಾದರೆ ನೆನಪಾಗಿ ನಮ್ಮನ್ನು ಸರಿ ದಾರಿಗೆ ಕರೆದುಕೊಂಡು ಹೋಗ್ತಾರೆ.  ಗಣಿತವನ್ನಷ್ಟೇ ಅಲ್ಲದೆ ಜೀವನದ ಬಗ್ಗೆ ತಿಳಿಸಿಕೊಟ್ಟವರು ಅವರು.  ಶಾಲೆ ನಾಲ್ಕು ಗಂಟೆಗೆ ಮುಗಿದರೂ ಅವರು ನಮ್ಮ  ಜೊತೆ ಏಳು ಗಂಟೆಯವರೆಗೂ ಇರುತ್ತಿದ್ದರು. ನಮಗೆ ಏನೇ ತೊಂದರೆ ಆದರೂ ತಕ್ಷಣ ಬಗೆಹರಿಸುತ್ತಿದ್ದರು. ಅವರೇ ನನಗೆ ಅಪ್ಪ ಇಲ್ಲ ಎಲ್ಲಾ .       ವಿದ್ಯಾರ್ಥಿಗಳ ಧೈರ್ಯ,  ಸ್ಪೂರ್ತಿ ಮತ್ತು ನಂಬಿಕೆ.  ನಂತರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೂ ಕೂಡ ನಮಗೆ ಕೊಡುವ ಸಮಯದಲ್ಲಿ , ಕಾಳಜಿಯಲ್ಲಿ ಏನು ಕೊರತೆ ಮಾಡಿಲಿಲ್ಲ.  ಗಣಿತದಲ್ಲಿ ಚಾಣಕ್ಯ,  ವಾಲಿಬಾಲ್ ನ ನಾಯಕ.  ಸ್ಪೂರ್ತಿ ಮತ್ತು ಸಾಧನೆ ಎಂಬ ಪದಗಳಿಗೆ ಜೀವ ನೀಡುವಂತಹ ವ್ಯಕ್ತಿತ್ವ.

    ಸಮಯ ಜೀವನದ ಬಹುದೊಡ್ಡ ಶಿಕ್ಷಕ. ಯಾಕೆಂದರೆ ಸಮಯ ಹೇಳು ಕೊಡುವಷ್ಟು ಯಾವುದು ಪಾಠವನ್ನು ಕಲಿಸುವುದಿಲ್ಲ.  ಆ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟ ನನ್ನ ತಾಯಿ ಮತ್ತು ಗಂಗಾಧರ್ ಸ್ವಾಮಿ ಸರ್ ಅವರಿಗೆ ಜೀವನ ಪೂರ್ತಿ ಚಿರಋಣಿಯಾಗಿರುತ್ತೇನೆ. 

ವಿದ್ಯಾ ಎಂ.ಎಸ್, ಪ್ರಥಮ ಬಿ.ಬಿ.ಎ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ


ಶಿಕ್ಷಕನ ಶಿಸ್ತು, ಅಪ್ಪನ ಪ್ರೀತಿ ಜತೆ ಸೇರಿದರೆ ಅದು ಧರ್ಮರಾಜ ಸರ್ 

ನಾನು ಮೊದಲನೇ ಬಾರಿ ವಸತಿ ಶಾಲೆಗೆ ಹೋಗಿದ್ದರಿಂದ ಮನೆಯ ನೆನಪು ತುಂಬಾ ಆಗುತ್ತಿತ್ತು. ನಾನು ನಮ್ಮ ಧರ್ಮರಾಜ ಸರ್ ಬಳಿ ಹೋಗಿ ನಮ್ಮ ಮನೆಗೆ ಕಾಲ್ ಮಾಡಿಕೊಂಡು ಎಂದು ತುಂಬಾ ಅಳುತ್ತಿದ್ದೆ. ಆಗ ನಮ್ಮ ಸರ್  “ಯಾಕ್ ಅಳುತ್ತೀಯಮ್ಮ ಸುಮ್ಮನಿರು ಇಲ್ಲಿ ನಾವೆಲ್ಲ ಇದ್ದೀವಿ” ಎಂದು ನನಗೆ ಸಮಾಧಾನ ಮಾಡಿದ್ದರು. 

ಧರ್ಮರಾಜ ಸರ್ ಮೂಲತಃ ಕುಮಟಾದವರು. ಇವರು ನಮ್ಮ ಹೊಸೂರು ಮುರಾರ್ಜಿ ಶಾಲೆಗೆ ಬಂದಿದ್ದರು. ಇವರು ಹಿಂದಿ ಭಾಷಾ ಶಿಕ್ಷಕರಾಗಿದ್ದರು. ನಮ್ಮ ಶಾಲೆಯಲ್ಲಿ ತುಂಬಾ ಹೊಡೆಯುವ ಶಿಕ್ಷಕ ಎಂದರೆ ಅದು ಇವರೇ. “ಎಲ್ಲರೂ ಈ ಸರ್  ತುಂಬಾ ಹೊಡೆಯುತ್ತಾರೆ ಇವರಿಗೆ ಕರುಣೆ ಅನ್ನೋದೇ ಇಲ್ಲ “ ಅಂದಿದ್ದರು. ಆದರೆ ಸರಿಯಾಗಿ ಹೊಡೆಯುತ್ತಾರೆ ಅದಕ್ಕೆ ಕಾರಣ ನಾವು ಅಥವಾ ಯಾರು ಅಂತ ಯೋಚನೆ ಮಾಡ್ತಾ ಇರಲಿಲ್ಲ. 

ಧರ್ಮರಾಜ ಸರ್ ಅವರನ್ನು ಎಲ್ಲರೂ “ಡಿಕೆ ಸರ್” ಅಂತ ಕರೀತಾ ಇದ್ರು.  ಯಾಕೆಂದರೆ ಅವರ ಪೂರ್ಣ ಹೆಸರು ಧರ್ಮರಾಜ ಕಟ್ಟಿಮನಿ. ಡಿಕೆ ಸರ್ ಬಳಿ ಯಾವುದೇ ಭೇದಭಾವ ಇರಲಿಲ್ಲ. ಅವರು ಎಲ್ಲರನ್ನೂ ತಮ್ಮವರು ಎಂದು ಭಾವಿಸಿ, ತಮ್ಮ ಮಕ್ಕಳ ರೀತಿಯಲ್ಲಿ ನೋಡುತ್ತಿದ್ದರು. ಯಾವುದೇ ವಿದ್ಯಾರ್ಥಿಗಳಿಗೆ ಏನಾದರೂ ಶಿಕ್ಷಣದಲ್ಲಿ ತೊಂದರೆ ಆಗುತ್ತಿದ್ದರೆ ಅವರಿಗೆ ಯಾವ ರೀತಿಯಲ್ಲಿ ಅರ್ಥವಾಗುತ್ತದೆಯೋ ಆ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ನನಗೆ ಒಂದು ರೀತಿಯಲ್ಲಿ ಡಿಕೆ ಸರ್ ನನ್ನ ತಂದೆ ರೀತಿ  ತರ ಕಾಣುತ್ತಿದ್ದರು. ಏಕೆಂದರೆ ನನಗೆ ಏನಾದರೂ ಬೇಜಾರು ಆದಾಗ ಅವರು ಮಕ್ಕಳ ರೀತಿ ಸಮಾಧಾನ ಮಾಡುತ್ತಿದ್ದರು. ಆದರೆ, ಪರೀಕ್ಷೆಗಳಲ್ಲಿ ಅಂಕಗಳು ಕಡಿಮೆ ಬಂದರೆ ತುಂಬಾ ಬಯ್ಯುತ್ತಿದ್ದರು. 

ಡಿಕೆ ಸರ್ ಅವರ ಪತ್ನಿ ಕವಿತಾ  ಎಂದು. ಇವರು ನಮ್ಮನ್ನು ಅವರ ಮನೆಗೆ ಕರೆದು ಅವರ ಮನೆಯಲ್ಲಿ ಏನು ಅಡುಗೆ ಮಾಡುತ್ತಿದ್ದರೋ  ಅದನ್ನು ನಮಗೆ ಬಡಿಸಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಮ್ಮ ಸರ್ಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಅವರ ಹೆಸರು ಯುವನ್ ಮತ್ತು ಯುವಿಕ. ನಾನು ಒಂದು ದಿನ ಡಿಕೆ ಸರ್ ಬಳಿ ‘ನನಗೆ ಛತ್ರಿ ಬೇಕಿತ್ತು ತಂದು ಕೊಡುತ್ತೀರಾ’ ಎಂದು ಕೇಳಲು ನನ್ನ ಗೆಳತಿಯನ್ನು ಕರಕೊಂಡು ಹೋಗಿದ್ದೆ.  ಅದಕ್ಕೆ ಸರ್ ‘ತಂದು ಕೊಡುತ್ತೇನಮ್ಮ’ ಎಂದು ಹೇಳಿದರು. ನಾನು ನನ್ನ ಬಳಿ ಇರುವ ದುಡ್ಡನ್ನು ಕೊಡಲು ಹೋದಾಗ ಅವರು ತೆಗೆದುಕೊಳ್ಳಲಿಲ್ಲ.  ಒತ್ತಾಯ ಮಾಡಿದಾಗ ಅವರ ಬಾಯಿಂದ ಒಂದು ಮಾತು ಬಂತು.  ‘ಯಾರಾದರೂ ತನ್ನ ಮಗಳ ಹತ್ರ ಹಣ ತಗೊಂಡು ಅವಳು ಕೇಳಿದ್ದನ್ನ ಕೊಡಿಸಲು ಇಷ್ಟಪಡುತ್ತಾರಾ?’ ಎಂದು ಕೇಳಿದರು. ಆಗ ನನಗೆ ತುಂಬಾ ಖುಷಿಯಾಯಿತು. ಏಕೆಂದರೆ ನಾವು ಇಷ್ಟಪಡುವ ಶಿಕ್ಷಕರಿಂದ ನಾವು ಅಂದುಕೊಂಡ ಹಾಗೆ ಅವರ ಮನಸ್ಸಲ್ಲಿ ನಾವು ಇದ್ದೀವಿ ಎಂದು ಅವರ ಬಾಯಿಂದ ಕೇಳಿದಾಗ ಅಷ್ಟು ಖುಷಿಯಾಗುತ್ತದೆ. 

ತಾಯಿಯೇ ಮೊದಲ ಗುರು ಗುರುವೇ ಎರಡನೇ ತಾಯಿ ಎನ್ನುವ ಗಾದೆ ನನ್ನ ಬಾಳಲಿ ತುಂಬಾ ಸತ್ಯ ಮಾಡಿಬಿಟ್ಟಿತ್ತು. ನನಗೆ ಯಾವುದೇ ವಿಷಯದಲ್ಲಿ ಅನುಮಾನವಿದ್ದಾಗ ಅವರ ಬಳಿ ನಾನು ಹೋಗುತ್ತಿದ್ದೆ. ಆಗ ಅವರು ಸರಿಯಾಗಿ ಅರ್ಥ ಮಾಡಿಸುತ್ತಿದ್ದರು.  ನನಗೆ ಚೆಸ್ ಆಟ ಆಡುವುದೆಂದರೆ ತುಂಬಾ ಇಷ್ಟ. ಯಾವಾಗಲಾದರೂ ನಾನು ಆರಾಮಾಗಿದ್ದಾಗ ಅಥವಾ ಶಾಲೆಯ ಸಂದರ್ಭದಲ್ಲಿ ಯಾರು ತರಗತಿ ತೆಗೆದುಕೊಂಡಿಲ್ಲ ಎಂದಾಗ ನಾನು ಸರ್ ಹತ್ತಿರ ಹೋಗಿ ಆಟವಾಡುತ್ತಿದ್ದೆ. ಆಟವಾಡುವ ಸಂದರ್ಭದಲ್ಲಿ ಏನಾದ್ರೂ ತಪ್ಪು ಮಾಡಿದರೆ ಅದನ್ನು ಸರಿಯಾಗಿ ಹೇಳಿಕೊಡುತ್ತಿದ್ದರು.  ಹಾಗೆ ನನಗೆ ಒಳ್ಳೆಯ ಕೋಚ್ ಕೂಡ ಆಗಿದ್ದರು. ನನ್ನ ತಂದೆ ತಾಯಿಯೂ  ಸಹ ಅವರ ಬಳಿ ನನ್ನ ಓದಿನ ಬಗ್ಗೆ ಆಗಲಿ ಅಥವಾ ನನ್ನ ನಡವಳಿಕೆ ಬಗ್ಗೆ ಆಗಲಿ ಕಾಲ್ ಮಾಡಿ ಹೇಳುತ್ತಿದ್ದರು.  ನಮಗೆ ಪೋಷಕರ ಸಭೆ ಇದ್ದಾಗ ನಮ್ಮ ತಂದೆಗೆ ನಾನು ಕಾಲ್ ಮಾಡಿ ಬನ್ನಿ ಎಂದು ಹೇಳುತ್ತಿರಲಿಲ್ಲ.  ಆದರೂ ನಮ್ಮ ತಂದೆ ತಾಯಿ ಸಭೆಯಲ್ಲಿ ಹಾಜರಿರುತ್ತಿದ್ದರು. ನಾನು ಆಶ್ಚರ್ಯದಿಂದ ಅಮ್ಮ ಅಪ್ಪ ನಿಮಗೆ ಹೇಗೆ ಗೊತ್ತಾಯ್ತು ಎಂದು ಕೇಳಿದಾಗ ನಮಗೆ ಹಿಂದಿಸರ್ ಹೇಳಿದ್ದರು ಎಂದು ಹೇಳುತ್ತಿದ್ದರು. ಅಷ್ಟೊಂದು ಒಡನಾಟ ನಮ್ಮ ಅಪ್ಪ ಅಮ್ಮ ಮತ್ತು ನಮ್ಮ ಶಿಕ್ಷಕರ ಮಧ್ಯ ಇತ್ತು.

 ನನಗೆ ಏನಾದರೂ ಹುಷಾರಿಲ್ಲ ಎಂದು ಮನೆಗೆ ಕಾಲ್ ಮಾಡಿದ್ರೆ ನಮ್ಮ ಮನೆಯಲ್ಲಿ ಹೌದಾ ಎಂದು ಹೇಳಿ ಕಾಲ್ ಕಟ್ ಮಾಡಿ ತಕ್ಷಣ ಸರ್ ಗೆ ಕಾಲ್ ಮಾಡಿ ಹುಷಾರಿಲ್ಲ ಅಂತ ಕಾಲ್ ಮಾಡಿದ್ಲು ಮಗಳು. ತುಂಬಾ ತುಂಬಾ ಹುಷಾರ್ ಇಲ್ವಾ ಸರ್ ಎಂದು ಕೇಳುತ್ತಿದ್ದರು ಅದಕ್ಕೆ ನಮ್ಮ ಸರ್ ನೀವೇನು ಬರಕ್ ಹೋಗ್ಬೇಡಿ, ನಾನು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತೇನೆ ಎಂದು ಸಮಾಧಾನ ಹೇಳಿ ಕಾಲ್ ಕಟ್ ಮಾಡುತ್ತಿದ್ದರು.  ಆದ ನಂತರ ನನ್ನನ್ನು ಕರೆದು ವಿಚಾರಿಸಿ ಮಾತ್ರಗಳನ್ನು ಕೊಟ್ಟು ಅದಕ್ಕೂ  ಗುಣವಾಗಿಲ್ಲ ಎಂದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. 

ನನ್ನ ಎಸ್ ಎಸ್ ಎಲ್ ಸಿ ಪರೀಕ್ಷೆಯ ರಿಸಲ್ಟ್ ಬರುವ ದಿನ ತುಂಬಾ ಆತುರದಿಂದ ಕಾಯುತ್ತಿದ್ದರಂತೆ. ನನ್ನ ಅಂಕವನ್ನು ನೋಡಿದ ಅವರು ನನಗೆ ಫೋನ್ ಮಾಡಿ ತುಂಬಾ ಖುಷಿಯಿಂದ ಚೆನ್ನಾಗಿ ಅಂಕ ಬಂದಿದೆ ಎಂದು ಹೇಳಿದರು.  ಹಾಗೆ ನನ್ನ ಅಪ್ಪ ಅಮ್ಮನ ಬಳಿ ತುಂಬಾ ಖುಷಿಯಿಂದ ಏನೂ ತಮ್ಮ ಮಗಳೇ ಒಳ್ಳೆಯ ಅಂಕ ತೆಗೆದುಕೊಂಡಿದ್ದಾಳೆ ಎನ್ನುವ ರೀತಿಯಲ್ಲಿ ಮಾತನಾಡಿದರು. ನಾನು ಪಿಯುಸಿಯಲ್ಲಿ ಸಹ ಯಾವ ವಿಷಯವನ್ನು ಓದಿದ್ರೆ ನಾನು ಮುಂದೆ ಚೆನ್ನಾಗಿ ಇರಬಹುದು ಎಂದು ಎಷ್ಟೋ ಜನರ ಬಳಿ ಕೇಳಿ ನನಗೆ ಸೈನ್ಸ್ ಮಾಡು ಎಂದು ಹೇಳಿದರು. ಅದು ನಮ್ಮ ಕಾಲೇಜಿನಲ್ಲಿ ಮಾಡಬೇಕು ಎಂದು ಹೇಳಿ ನನ್ನನ್ನು ಅವರ ಕಾಲೇಜಿಗೆ ಸೇರಿಸಿದರು.  

ಅಕ್ಷತಾ ಸಿ.ಜಿ, ಪ್ರಥಮ ಬಿ..ಸಿ.ಎ, ‘ಬಿ’ವಿಭಾಗ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ


ಮಕ್ಕಳ ಹಕ್ಕುಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ವೈಲೇಶ ಸರ್ 

ಶಿಕ್ಷಕರು ಎಂದರೆ ಮುಗ್ಧ ಮನಸ್ಸಿನ ಮೇಲೆ ಬೀಜ ಎಂಬ ಅಕ್ಷರವನ್ನು ಬಿತ್ತಿ ಮಕ್ಕಳ ಜೀವನದಲ್ಲಿ ಬೆಳಕನ್ನು ಮೂಡಿಸುವ ಶಿಲ್ಪಿ, ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಗುರು, ಎಂದರೆ ಬ್ರಹ್ಮ ಗುರು ಎಂದರೆ ವಿಷ್ಣು ಗುರುವೇ ಮಹೇಶ್ವರನು. ಗುರುವೇ ಪರಬ್ರಹ್ಮನು. ಇವರಿಗೆ ನನ್ನ ನಮನಗಳು ಎಂದು ಈ ಪ್ರಾರ್ಥನೆಯ ಅರ್ಥ.  ಗುರುವನ್ನು ಸಾಕ್ಷಾತ್ ಬ್ರಹ್ಮನಿಗೆ ಹೋಲಿಸಿದ್ದಾರೆ. ಬ್ರಹ್ಮ ಜಗತ್ತನ್ನು  ಸೃಷ್ಟಿಸಿದರೆ ಗುರುವೂ ಒಳ್ಳೆಯ ಮತ್ತು ಸುಂದರ ರಾಷ್ಟ್ರವನ್ನು ಸೃಷ್ಟಿಸುತ್ತಾನೆ. ಶಿಕ್ಷಕ ಎಂದರೆ ಶಿ ಎಂದರೆ ಶಿಕ್ಷೆ , ಕ್ಷ ಎಂದರೆ ಕ್ಷಮೆ ಕ ಎಂದರೆ ಕರುಣೆ. ಈ ಮೂರು ಅಕ್ಷರದಲ್ಲಿ ಇಷ್ಟು ಅರ್ಥವನ್ನು ಹೊಂದಿದೆ. ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನು ನೀಡುತ್ತಾರೆ. ಅಂತಹ ಮಹತ್ವದ ಸ್ಥಾನ ಶಿಕ್ಷಕರದ್ದು. 

ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣದ ಮೆಟ್ಟಿಲನ್ನು ಹತ್ತಿದ ಮೇಲೆ ಅವರ ನೆಚ್ಚಿನ ಶಿಕ್ಷಕರು ಎಂದು ಒಬ್ಬರು ಇದ್ದೇ ಇರುತ್ತಾರೆ.  ಹಾಗೆಯೇ ನನಗೂ ಕೂಡ ನನ್ನ ಶಿಕ್ಷಣ ಜೀವನದಲ್ಲಿ ಒಬ್ಬ ನೆಚ್ಚಿನ ಶಿಕ್ಷಕರು ಇದ್ದಾರೆ. ಅವರ ಹೆಸರು ವೈಲೇಶ ಸರ್. 

ವೈಲೇಶ ಸರ್ ನನ್ನ ಪ್ರೌಢಶಾಲೆಯ ಗಣಿತ ಶಿಕ್ಷಕರು.  ಇವರು ನಮಗೆ ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ನೀಡಿದವರು.  ಇವರು ನಮಗೆ ನಮ್ಮ ವೈಯಕ್ತಿಕ ಜೀವನದಲ್ಲಿ ನಡೆದಿರುವ ಎಷ್ಟೋ ನೈಜ ಉದಾಹರಣೆಗಳನ್ನ ನೀಡಿ ಜೀವನದಲ್ಲಿ ಕುಗ್ಗದೆ,  ಸೋಲದೆ ಯಾವ ರೀತಿ ಜೀವನ ನಡೆಸುವುದು ಎಂದು ಹೇಳುತ್ತಿದ್ದರು. ಇವರು ತಮ್ಮ ಶಿಕ್ಷಣ ವೃತ್ತಿಯಲ್ಲಿ ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳನ್ನು ನೋಡಿದ್ದಾರೆ. ಅವರು ಎಲ್ಲರ ಹೆಸರನ್ನು ನೆನಪು ಇಟ್ಟು ಕೊಂಡಿರುತ್ತಾರೆ. ಅವರು ಕೇವಲ ಶಿಕ್ಷಣದಿಂದ ಉದ್ಯೋಗವನ್ನು ಪಡೆದು ಜೀವನ ಸಾಗಿಸುವುದು ಹೇಗೆ ಎಂದು ಹೇಳದೆ ಶಿಕ್ಷಣವನ್ನ ಹೊರತುಪಡಿಸಿ ಜೀವನದಲ್ಲಿ ಹೇಗೆ ಗೆಲ್ಲಬೇಕು ಎಂಬ ನೀತಿ ಕಥೆಗಳನ್ನು ಹೇಳುತ್ತಿದ್ದರು.  ಅವರು ಶಿಕ್ಷಣ ನೀಡುವಲ್ಲಿ ನಾನು ಕಂಡ ಎಲ್ಲಾ ಶಿಕ್ಷಕರಿಂದ ವಿಭಿನ್ನವಾಗಿದ್ದಾರೆ. ಅವರು ಕೆಲವು ಬಾರಿ ಶಾಲೆಯಿಂದ ಮೀಸಲಾಗಿರುವ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಸಿಗದೇ ಇದ್ದಾಗ ಮಕ್ಕಳ ಪರವಾಗಿ ಧ್ವನಿ ಎತ್ತಿರುವುದನ್ನು ನಾನು ನೋಡಿದ್ದೇನೆ. ಗುರು ಎಂದರೆ ಸಹನೆ ಕರುಣೆ ಮತ್ತು ಇತರ ಗುಣಗಳನ್ನು ಹೊಂದಿರುತ್ತಾರೆ. ಹಾಗೆ ಇವರು ಕೂಡ ನಮಗೆ ಒಂದು ಬಾರಿ ಹೇಳಿದ ಲೆಕ್ಕ ಸೂತ್ರಗಳು ಅರ್ಥವಾಗದೆ ಇದ್ದಾಗ ಇವರು ಎಷ್ಟು ಬಾರಿ ಕೇಳಿದರೂ  ತುಂಬಾ ಸಹನೆಯಿಂದ ಅರ್ಥ ಮಾಡಿಸುತ್ತಿದ್ದರು. ಇವರು ನಮ್ಮ ಶಾಲೆಯ ಬಹು ಮಕ್ಕಳಿಗೆ ನೆಚ್ಚಿನ ಶಿಕ್ಷಕರಾಗಿದ್ದಾರೆ. 

ವೈಲೇಶ ಸರ್ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಲ್ಲಿ ನಮಗೆ ಭಾನುವಾರ ಕೂಡ ತರಗತಿಗಳನ್ನ ಮಾಡುತ್ತಿದ್ದರು. ಈ ಶಿಕ್ಷಕರು ನಮ್ಮ ಪ್ರೌಢಶಾಲೆ ಇರುವ ಹಳ್ಳಿಯವರೆಗೆ ಹಾಗೂ ಸುತ್ತಮುತ್ತಲಿನ ಊರಿನವರೆಗೂ ಚಿರಪರಿಚಿತರು. ಭಾನುವಾರ ಯಾರು ತರಗತಿಗೆ ಬರುತ್ತಿಲ್ಲ ಅವರಿಗೆ ಫೋನ್ ಮೂಲಕ ಕರೆಸಿಕೊಳ್ಳುತ್ತಿದ್ದರು. ಅದೇ ಊರಿನ ವಿದ್ಯಾರ್ಥಿ ತರಗತಿಗೆ ಬರಲಿಲ್ಲ ಎಂದರೆ ಅವರ ಮನೆಗೆ ಹೋಗಿ ಕರೆಯುತ್ತಿದ್ದರು. ಇವರಿಗೆ ಇಷ್ಟು ಎಲ್ಲಾ ಅವಶ್ಯಕತೆ ಇರಲಿಲ್ಲ ಆದರೂ ತಮ್ಮ ವಿದ್ಯಾರ್ಥಿಗಳು  ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಪ್ರಯತ್ನ ಪಡುತ್ತಿದ್ದರು. ಇನ್ನು ಪರೀಕ್ಷೆಯ ಸಮಯ ಬಂದರೆ ಒಂದು ಅಥವಾ ಎರಡು ವಾರ ಇದ್ದ ಹಾಗೆ ಅವರು ಶಾಲೆಯ ಸಮಯವನ್ನು ಹೊರತುಪಡಿಸಿ ವಿಧ್ಯಾರ್ಥಿಗಳ ಮನೆಗಳಿಗೆ ಹೋಗಿ ಅವರಿಗೆ ಅರ್ಥವಾಗುವಂತೆ ಹೇಳಿಕೊಡುತ್ತಿದ್ದರು. 

ಈ ಗುರುಗಳಿಗೆ ಒಂದು ಕಾಲು ಅಪಘಾತದಿಂದ ಫ್ಯಾಕ್ಚರ್ ಆಗಿ ಒಂದು ತಿಂಗಳು ಅವರು ಶಾಲೆಗೆ ಬಾರದ ಹಾಗೆ ಆಯಿತು. ಇದರಿಂದ ನಾವು ತುಂಬಾ ನಷ್ಟವನ್ನು ಅನುಭವಿಸಿದವು. ಬೇರೆ ಶಿಕ್ಷಕರು ಅವರ ತರಗತಿ ತೆಗೆದುಕೊಂಡರೂ  ನಮಗೆ ಅವರ ಹಾಗೆ ಪಾಠ ಮಾಡುವವರು ಸಿಗಲಿಲ್ಲ. ಅವರಿಗೆ ಕಾಲು ಸರಿ ಇಲ್ಲದಿದ್ದರೂ ನಮಗೆ ಪಾಠ ಮಾಡಲು ಬರುತ್ತಿದ್ದರು. ಅವರು ತಮ್ಮ ನೋವನ್ನು ಎಂದಿಗೂ ಮಕ್ಕಳ ಬಳಿ ಹೇಳುತ್ತಿರಲಿಲ್ಲ. ಇವರು ತರಗತಿಯಲ್ಲಿ ಶಿಕ್ಷಕರಾಗಿ ತರಗತಿಯಿಂದ ಆಚೆಗೆ ಹೋದರೆ ಸ್ನೇಹಿತರಾಗಿ ವರ್ತಿಸುತ್ತಿದ್ದರು. ಇವರು ತಮ್ಮ ವೈಯಕ್ತಿಕ ಹಣದಿಂದ ಮಕ್ಕಳಿಗೆ ಇನ್ನೂ ಸುಲಭವಾಗಿ ಅರ್ಥವಾಗುವಂತಹ ಉಪಕರಣಗಳನ್ನು ತರುತ್ತಿದ್ದರು. ನಾವು ಎಷ್ಟೋ ಬಾರಿ ಊಟದ ಸಮಯದಲ್ಲಿ ಅವರ ಹತ್ತಿರ ಪಾಠದ ವಿಷಯದಲ್ಲಿ ಅರ್ಥವಾಗದೆ ಇರುವುದನ್ನು ಕೇಳಿದರೆ ಊಟ ಮಾಡುವುದನ್ನು ಬಿಟ್ಟು ಹೇಳಿಕೊಡುತ್ತಿದ್ದರು ಜೀವನದ ದಾರಿ ತೋರಿದ ಶಿಕ್ಷಕ ಎಂದು ಹೇಳಿದರೆ ತಪ್ಪಾಗಲಾರದು.  ನಾವು ಇವರಿಂದ ತುಂಬಾ ಕಲಿತಿದ್ದೇವೆ.  ಅವರು ಪ್ರತಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ವಿತರಿಸುವ ಸಮಯದಲ್ಲಿ ಮಹಾಭಾರತದ ಒಂದು ಮಾತನ್ನು ತುಂಬಾ ಹೇಳುತ್ತಿದ್ದರು. ಅದು ಏನೆಂದರೆ “ಈ ಸಮಯ ಕ್ಷಣಿಕ” ಎಂದು. ಉತ್ತೀರ್ಣರಾದವರು ತುಂಬಾ ಖುಷಿಯಿಂದ ಮತ್ತು ಅನುತ್ತೀರ್ಣರಾದವರು ತುಂಬಾ ದುಃಖದಿಂದ ಇರುತ್ತಾರೆ. ಆದರೆ ಖುಷಿ ಕೂಡ ಕ್ಷಣಿಕ ಹಾಗೂ ದುಃಖ ಕೂಡ ಕ್ಷಣಿಕ ಎಂದು ಹೇಳುತ್ತಿದ್ದರು.  ಇಂತಹ ಗುರುಗಳು ಯಾವಾಗಲೂ ನಮ್ಮ ಸಮಾಜಕ್ಕೆ ಬೇಕು.

ಗೀತಾ ಎಂ.ಎಸ್, ಪ್ರಥಮ ಬಿ..ಸಿ.ಎ, ‘ಬಿ’ವಿಭಾಗ, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಶಿವಮೊಗ್ಗ


Search