Posted on 16-08-2025 |
Share: Facebook | X | Whatsapp | Instagram
ಗಿರೀಶ್ ಕಾರ್ನಾಡ್ ದೇಶದ ಅತ್ಯುತ್ತಮ ಸಾಂಸ್ಕೃತಿಕ ವ್ಯಕ್ತಿ ಟಿ.ಪಿ.ಅಶೋಕ್
ಶಿವಮೊಗ್ಗ ಆ 16 ಗಿರೀಶ್ ಕಾರ್ನಾಡ್ ದೇಶ ಕಂಡ ಅತ್ಯುತ್ತಮ ಸಾಂಸ್ಕೃತಿಕ ವ್ಯಕ್ತಿ ಎಂದು ವಿಮರ್ಶಕ ಟಿ.ಪಿ.ಅಶೋಕ್ ಹೇಳಿದರು.ಅವರು ಬಹುಮುಖಿ ಶಿವಮೊಗ್ಗದ 57ನೇ ಕಾರ್ಯಕ್ರಮದಲ್ಲಿ ಕಾರ್ನಾಡರ ಸಿನಿಮಾ ಕುರಿತ ಕಾರ್ನಾಡ್ ಕೆಲೀಡೋಸ್ಕೋಪ್ ಪುಸ್ತಕದ ಬಗ್ಗೆ ಮಾತನಾಡುತ್ತಿದ್ದರು.
ಕಾರ್ನಾಡರು ನಾಟಕ ಕ್ಷೇತ್ರದಲ್ಲಿ ಅತ್ಯಂತ ಉತ್ತಮ ಕೆಲಸ ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲು ಕೂಡ ನಟನಾಗಿ ನಿರ್ದೇಶಕನಾಗಿ ಸಿನಿಮಾ ಸಾಹಿತ್ಯ ಬರವಣಿಗೆಗಾರರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಖಜಾನೆ ಅವರ ಈ ಕೃತಿಯಲ್ಲಿ ಕಾರ್ನಾಡರ ಚಿತ್ರದ ಸುತ್ತ ಮುತ್ತಲಿನ ಸ್ವಾರಸ್ಯಕರ ವಿಷಯ ಇದೆ,ಖಜಾನೆಯವರು ಪತ್ರಕರ್ತ ರಾಗಿದ್ದರಿಂದ ಆಸಕ್ತಿ ಕೆರಳಿಸುವ ರೀತಿಯಲ್ಲಿ ಬರೆದಿದ್ದಾರೆ.ಸಂಸ್ಕಾರ ಕಾದಂಬರಿ ಮತ್ತು ಚಿತ್ರವು ರಾಮಾನುಜನ್ ಮತ್ತು ಸತ್ಯಜಿತ್ ರಾಯ್ ಅವರಿಗೆ ಮೆಚ್ಚುಗೆ ಆಗಿತ್ತು,ಅಮೆರಿಕದ ವಿಶ್ವವಿದ್ಯಾಲಯವು
ಇದನ್ನು ಪಠ್ಯವನ್ನಾಗಿ ಮಾಡಿತ್ತು.ಇಂತ ಕಾದಂಬರಿ ಸಿನಿಮಾ ಆದಾಗ ಪ್ರಾಣೇಶಾಚಾರ್ಯರು ಪಾತ್ರ ಮಾಡಿದ ಕಾರ್ನಾಡ್ ರಿಂದ ಸಿನಿಮಾ ಅಂತಾರಾಷ್ಟ್ರೀಯ ವಾಗಿ ಜನಪ್ರಿಯತೆ ಗಳಿಸಿತು.ವಂಶವೃಕ್ಷ , ತಬ್ಬಲಿಯು ನೀನಾದೆ ಮಗನೆ, ಕಾಡು ಚಿತ್ರದ ಅವರ ಅಭಿನಯ ಮನೋಜ್ಞವಾಗಿತ್ತು.ಉತ್ಸವ ಹಿಂದಿ ಚಿತ್ರವನ್ನು ಇವರು ನಿರ್ದೇಶನ ಮಾಡಿ ಜನಪ್ರಿಯರಾಗಿದ್ದರು.ಇವರು ತಮ್ಮ ನಾಟಕವನ್ನು ಸಿನಿಮಾ ಮಾಡಿ ಹಾಳು ಮಾಡುವುದು ಬೇಡ ಎಂದು ತಿಳಿದು ಅದನ್ನು ಚಿತ್ರ ಮಾಡಲಿಲ್ಲ. ಸಂಸ್ಕಾರ ಕಾದಂಬರಿ ರಷ್ಯನ್ ಭಾಷೆಗೆ ಅನುವಾದ ಆದಾಗ ರಷ್ಯಾದ ಮಹಿಳೆ ಒಬ್ಬಳು ಈ ಕೃತಿ ನಮ್ಮ ದೇಶದ ಬಗ್ಗೆ ಬರೆದಂತಿದೆ ಎಂದಿದ್ದಳು.ತಬ್ಬಲಿ ನೀನಾದೆ ಮಗನೆ ಕೃತಿ ಇಂದಿಗೂ ಕೂಡ ಚರ್ಚಿತ ವಿಷಯವಾಗಿದೆ.ಅವರ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಸಿನಿಮಾ ಕೆಲಸಗಳು ಅದ್ಭುತ ಎನ್ನುವಷ್ಟು ಇಲ್ಲ, ಒಟ್ಟಿನಲ್ಲಿ ಈ ಕೃತಿ ಕಾರ್ನಾಡ್ ಕೆಲಿಡೋಸ್ಕೋಪ್ ಜಗತ್ತಿಗೆ ಕಾರ್ನಾಡ್ ಮತ್ತು ಅವರ ಚಿತ್ರಗಳ ಬಗ್ಗೆ ತಿಳಿಸುತ್ತದೆ.ಎಂದರು.
ವೇದಿಕೆಯಲ್ಲಿ ಕಾರ್ನಾಡರ ಪುಸ್ತಕದ ಲೇಖಕ ಹಾಗೂ ಎನ್.ಇ.ಎಸ್.ಸಂಸ್ಥೆಯ ಹಳೆಯ ವಿದ್ಯಾರ್ಥಿ ಮುರುಳಿಧರ ಖಜಾನೆ ಉಪಸ್ಥಿತರಿದ್ದು ಸಭಿಕರನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿ ತಮ್ಮ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಮಾತನಾಡಿ ಕಾರ್ನಾಡರು ಶಿಸ್ತಿನ ಸಿಪಾಯಿಗಳು ಅವರು ನಾಟಕ ಕತೆ ಎಲ್ಲದರಲ್ಲೂ ಪರಿಣಿತರು ಅವರ ಕತೆ ಓದಿದರೂ ಚಿತ್ರ ನೋಡಿದಂತಾಗುತ್ತಿತ್ತು, ಎಂದರು.
ಹಿಂದೂಸ್ತಾನಿ ಸಂಗೀತದ ಕಲಾವಿದರು ಗುರುಗಳು, ನಟರು, ಅಂತಾರಾಷ್ಟ್ರೀಯ ಪತ್ರಕರ್ತರು ಸಂಶೋಧಕರು ಆದ ಎಂ.ಕೆ.ಶಂಕರ್ ಮಾತನಾಡಿ ಕಾರ್ನಾಡರು ಕಾದಂಬರಿಯ ಪರಿಧಿ ಮೀರಿ ವಿಷಯವನ್ನು ಚಿತ್ರಗಳಲ್ಲಿ ಹೊರತಂದಿದ್ದಾರೆ, ನಾಟಕದಲ್ಲಿ ತಂದ ಅಭಿನಯವನ್ನು ಸಿನಿಮಾದಲ್ಲಿ ತರಲು ಸಾಧ್ಯವಿಲ್ಲ ಅಲ್ಲಿ ನಟ ನಿರ್ದೇಶಕನ ಮರ್ಜಿಗೆ ಒಳಪಡುತ್ತಾರೆ ಹಾಗಾಗಿ ನಾಟಕದ ಅಭಿನಯ ಉತ್ತಮ, ಆದರೆ ಹೆಚ್ಚು ಜನರನ್ನು ತಲುಪಲು ಸಿನಿಮಾ ಅವಶ್ಯಕ, ಕಾರ್ನಾಡರು ಸಿನಿಮಾದಲ್ಲಿ ಹೊಸತನವನ್ನು ತಂದಿದ್ದಾರೆ,ಆದರೆ ನಾಟಕದ ಕೃತಿಗಳಲ್ಲಿ ತಮ್ಮತನ ಮೆರೆದಿದ್ದಾರೆ ಎಂದರು.
ಬಹುಮುಖಿಯ ಡಾ.ನಾಗಭೂಷಣ್ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡಿದರು.