Posted on 15-08-2025 |
Share: Facebook | X | Whatsapp | Instagram
ತ್ಯಾಗ ಮತ್ತು ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ
ಶಿವಮೊಗ್ಗ ಆಗಸ್ಟ್ 15 ತ್ಯಾಗ ಮತ್ತು ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಬಂದಿದೆ ಕೇವಲ ಒಬ್ಬರ ಹೋರಾಟದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ ಎಂದು ನಿವೃತ್ತ ಇತಿಹಾಸ ಉಪನ್ಯಾಸಕ ಡಾ. ಕೆ ಜಿ ವೆಂಕಟೇಶ್ ಹೇಳಿದರು.
ಅವರು ನಗರದ ಸರ್ವೋದಯ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು
ಸ್ವಾತಂತ್ರ್ಯ ಇಲ್ಲದಿದ್ದರೆ ಮನುಷ್ಯ ಬದುಕಿದ್ದು ಸತ್ತಂತೆ. ಬ್ರಿಟಿಷರು ಬರುವುದಕ್ಕಿಂತ ಮುಂಚೆ ಭಾರತ ಸ್ವಾತಂತ್ರವನ್ನು ಕಳೆದುಕೊಂಡಿತ್ತು ಆದರೆ ಬ್ರಿಟಿಷರು ಬಂದಮೇಲೆ ಭಾರತೀಯರು ವಿದ್ಯಾವಂತರಾಗಿ ಸ್ವಾತಂತ್ರ್ಯ ಅರ್ಥವನ್ನು ಕಂಡುಕೊಂಡು ಬ್ರಿಟಿಷರ ವಿರುದ್ಧ 1857ರಲ್ಲಿಯೇ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವನ್ನು ನಡೆಸಿದರು.
1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ ನಂತರ ಮಂದಗಾಮಿಗಳು ತೀವ್ರಗಾಮಿಗಳು ಮತ್ತು ಗಾಂಧಿಯವರು ದೊಡ್ಡ ಹೋರಾಟವನ್ನು ಕೈಗೊಂಡರು ಮಂದಗಾಮಿಗಳು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರೆ ತೀವ್ರಗಾಮಿಗಳ ಮುಖ್ಯಸ್ಥರಾದ ಲಾಲ ಲಜಪತರಾಯ್ ಬಾಲಗಂಗಾಧರ ತಿಲಕ್ ಬಿಪಿನ್ ಚಂದ್ರ ಪಾಲ್ ರವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವದೇಶಿ ವಸ್ತುಗಳನ್ನು ಉಪಯೋಗಿಸಲು ಕರೆ ನೀಡಿದರು, ತಿಲಕರು ಸ್ವರಾಜ್ಯ ನನ್ನ ಆಜನ್ಮ ಸಿದ್ಧವಾದ ಹಕ್ಕು ಎಂದು ತಿಳಿಸಿದರು 1920 ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿ 1930ರಲ್ಲಿ ಕಾನೂನು ಭಂಗ ಚಳುವಳಿ 1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಎಂಬ ಹೋರಾಟವನ್ನು ಕೈಗೊಂಡು ಸಂಪೂರ್ಣ ಭಾರತ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ 1947ರಲ್ಲಿ ಭಾರತ ಸ್ವಾತಂತ್ರ ಪಡೆಯುವುದಕ್ಕೆ ಕಾರಣರಾದರು.
ಸ್ವಾತಂತ್ರ್ಯವನ್ನು ಪಡೆದುಕೊಂಡಷ್ಟೇ ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ನಮ್ಮ ನೆರೆಯ ದೇಶವಾದ ಪಾಕಿಸ್ತಾನ ಮೂರು ಸಾರಿ ದೊಡ್ಡ ಯುದ್ಧವನ್ನು ಮಾಡಿ ಭಾರತವನ್ನು ಸೋಲಿಸಲು ಪ್ರಯತ್ನ ಪಟ್ಟಿತು ಆದರೆ ಮೂರು ಬಾರಿಯೂ ಪಾಕಿಸ್ತಾನವನ್ನು ಭಾರತ ಬಗ್ಗು ಬಡಿಯಿತು ಪುಣ್ಯವಶಾತ್ ಜವಾಹರಲಾಲ್ ನೆಹರು ರವರಿಂದ ಹಿಡಿದು ಇಂದಿನ ನರೇಂದ್ರ ಮೋದಿಯವರೆಗೆ ಅತ್ಯುತ್ತಮ ಪ್ರಧಾನಿಗಳು ಭಾರತಕ್ಕೆ ದೊರಕಿದರು, ತೀರ ಇತ್ತೀಚೆಗೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿ 26 ಜನ ಪ್ರವಾಸಿಗಳನ್ನು ಕೊಂದು ಹಾಕಿತು, ಆದರೆ ಭಾರತ ಆಪರೇಷನ್ ಸಿಂಧೂರ ಜಾರಿಗೆ ಮಾಡಿ ಭಯೋತ್ಪಾದಕರ ನೆಲೆಯನ್ನು ನಾಶ ಮಾಡಿ ನಂತರ ಭಯೋತ್ಪಾದಕರನ್ನು ನಾಶ ಮಾಡಿತು. ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ಅರಿತು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ದೇಶಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಧುರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜಿನವರೆಗೆ ಸಂಸ್ಥೆಯ ಎಲ್ಲಾ ಮುಖ್ಯಸ್ಥರುಗಳು ಭಾಗವಹಿಸಿದ್ದರು ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳನ್ನು ನಡೆಸಿ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಿದ್ಯಾರ್ಥಿಗಳು ಮಾಡಿದರೆ ಶಿಕ್ಷಕರುಗಳು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.