Posted on 24-06-2025 |
Share: Facebook | X | Whatsapp | Instagram
ಕಳೆದು ಹೋದ ಹಾಡು ನಾಟಕ ವಿಮರ್ಶೆ.
ಮನದ ಭಾವನೆಗಳೇ ಮಾತಾಗಿ ಹಾಡಾಗಿ ಹರಿದು ಹೋದದ್ದೇ ನಾಟಕವೆಂಬ ನಿಜ ಅಂತರಂಗ
ಶಿವಮೊಗ್ಗ ಜೂನ್ 22 ಇಲ್ಲಿನ ಸಂಸ್ಕೃತಿಕ ಭವನದ ರಂಗಾಯಣದಲ್ಲಿ ನಡೆದ ನಾಟಕ ಬೆಂಗಳೂರಿನ ಪಯಣ ತಂಡದವರು ಸಾದರಪಡಿಸಿದ ಕಳೆದು ಹೋದ ಹಾಡು.
ಈ ಮಾನವ ಸಮಾಜದಲ್ಲಿ ಗಂಡು ಹೆಣ್ಣಿಗೆ ವಿಶೇಷವಾದ ಪ್ರಶಸ್ತವಿದೆ. ಸಾಮಾನ್ಯವಾಗಿ ಯೋಚನೆ ಮಾಡುವಾಗ ಮಾನವರು ಎಂದರೆ ಗಂಡು ಮತ್ತು ಹೆಣ್ಣು ಮಾತ್ರ ಎಂದುಕೊಳ್ಳುತ್ತೇವೆ. ಆದರೆ ನಮ್ಮ ನಡುವೆಯೇ ಎದ್ದು ಗಂಡು ಎನಿಸಿ ಬೆಳೆಯುತ್ತಾ ಹೋದಂತೆ ಹೆಣ್ಣಾಗುವ ಹೆಣ್ಣು ಎನಿಸಿ ಬೆಳೆಯುತ್ತಾ ಹೋದಂತೆ ಗಂಡ ಆಗುವ ತೃತೀಯ ಲಿಂಗಿಗಳು ಅಥವಾ ಲೈಂಗಿಕ ಅಲ್ಪಸಂಖ್ಯಾತರು ನಮ್ಮ ನಡುವೆ ಅವರದೇ ಆದ ಸಮಾಜವನ್ನು ಸಮುದಾಯವನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಅವರಿಗೂ ಒಂದು ಮನಸ್ಸಿದೆ ಬದುಕಿದೆ ಭಾವನೆಗಳಿವೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ.
ಇಂತಹ ಸಮಾಜದ ಸುಮಾರು 13 ಜನರು ಒಂದು ತಂಡವನ್ನು ಕಟ್ಟಿಕೊಂಡು ನಾಟಕದ ಪಯಣವನ್ನು ಕೈಗೊಂಡಿದ್ದಾರೆ ತಂಡ ಪಯಣವಾದರೆ ನಾಟಕ ಕಳೆದು ಹೋದ ಹಾಡು.
ಈ ನಾಟಕವನ್ನು ನಿರ್ದೇಶನ ಮಾಡಿದವರು ರೋಮಿ ಹರಿತ್ ರವರು. ಶಿವಮೊಗ್ಗಕ್ಕೆ ಪ್ರಸ್ತುತಪಡಿಸಿದವರು ಶಿವಮೊಗ್ಗದಲ್ಲಿಯೂ ಇರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು.
ತೆರೆ ಸರಿಯುತ್ತಿದ್ದಂತೆ ಹಿನ್ನೆಲೆಯಲ್ಲಿ ಅತ್ಯುತ್ತಮವಾದ ಸಂಗೀತ ಹೊರಬಂತು. ಅದರ ಜೊತೆಗೆನೇ 13 ಜನರ ಒಂದು ಗುಂಪು ಒಂದು ತಮಷ್ಟಕ್ಕೆ ಅಭಿನಯ ಮಾಡುತ್ತಾ ಮಾಡುತ್ತಾ ಅವರ ಬಾಲ್ಯ ಯೌವ್ವನ ವೃದ್ದಾಪ್ಯ ದಿನಗಳನ್ನು ಪ್ರೇಕ್ಷಕರಿಗೆ ತೋರಿಸುತ್ತಾ ಹೋದರು.ಹಿನ್ನೆಲೆಯಲ್ಲಿ ಧ್ವನಿ ಯೊಂದು ನೀನು ಗಂಡಿರಬಹುದು ಇಲ್ಲವೇ ಹೆಣ್ಣಾಗಿರಬಹುದು ಆದರೆ ನಿನಗೆ ಮಕ್ಕಳನ್ನು ಪಡೆಯಲು ಆಗುತ್ತದೆಯೇ ಎಂದು ಕೇಳುತ್ತಲೇ ಅವರ ಭಾವನೆಗಳು ಉಕ್ಕಿ ಹೊರ ಬರುತ್ತವೆ. ತಮ್ಮದಲ್ಲದ ತಪ್ಪಿಗೆ ತಮ್ಮ ಮನೆಯಲ್ಲಿ ಬೈಸಿಕೊಂಡು ಊರು ಬಿಡುವ ಇವರಿಗೆ ಬೆಂಗಳೂರು ಆಶ್ರಯ. ನಿಮ್ಮಿಂದಲೇ ಮನೆತನದ ಮಾನ ಮರ್ಯಾದೆ ಹಾಳಾಯಿತು. ಎಂಬ ಮಾತಿನಿಂದಲೇ ಅವರ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ. ಊರು ಬಿಟ್ಟು ಪರ ಊರಿಗೆ ಹೋದರೆ ನಿಮ್ಮಂತವರಿಗೆ ಬಾಡಿಗೆ ಮನೆ ಕೊಡುವುದಿಲ್ಲ ಎಂಬ ಮಾತುಗಳು ಕಿವಿಯಲ್ಲಿ ಕೂರ್ದಶಿಯಂತೆ ಬಡಿಯುತ್ತವೆ. ಬಡತನಕ್ಕೆ ಸಿಲುಕಿ ಹಾಕಿಕೊಂಡ ಚಡ್ಡಿ ಯು ತೂತ ಬಿದ್ದರೆ ಅದನ್ನು ಮುಚ್ಚಿಕೊಳ್ಳಲು ಸೀರೆಯನ್ನೇ ಉಟ್ಟಿಕೊಂಡು ಅದರಲ್ಲಿ ಸುಖ ಪಡುವ ಮನಸು. ಯಾರದೋ ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದರೆ ತಾನು ಅದರಂತೆ ಆಗಬೇಕೆಂದು ಕುಂಕುಮವನ್ನು ಕಲಸಿ ಮುಖಕ್ಕೆ ಹಚ್ಚಿಕೊಂಡು ಕನ್ನಡಿಯ ನೋಡುತ್ತಾ ಸುಖ ಪಡುವ ರೀತಿಯೇ ಸೊಗಸು ಎನಿಸಿದರು ಸೂಳೆಯ ರೀತಿ ಕನ್ನಡಿ ನೋಡುತ್ತೀಯಾ ಎಂಬ ಚುಚ್ಚುವ ಮಾತುಗಳು ಅದರ ಹಿಂದಿರುವ ಸನ್ನಿವೇಶ ತೃತೀಯ ಲಿಂಗಿಗಳಿಗೆ ಮಾತ್ರ ಅರ್ಥವಾಗುವಂಥದ್ದು.
ಎಲ್ಲಿ ಕಳೆದು ಹೋಯಿತು ನನ್ನ ನಿಜರೂಪದ ಕನ್ನಡಿ ಎಂಬ ಹಾಡಿನಲ್ಲಿ ಅವರು ಕೂಡ ತಮ್ಮ ಲಿಂಗತ್ವವನ್ನು ಕಳೆದುಕೊಂಡು ಅಲ್ಪಸಂಖ್ಯಾತ ಲಿಂಗೀಯರಾದರು. ಶಾಲೆಗಳಲ್ಲಿ ಪಿ.ಟಿ.ಮಾಸ್ಟ್ರು ಡ್ರಿಲ್ ಮಾಡಿಸುವಾಗ ವಾಕ್ ಮಾಡಿಸುವಾಗ ನೆಟ್ಟಗೆ ನಡೆಯಲಿಲ್ಲವೆಂದು ತಿಂದ ಪೆಟ್ಟು ಹಾಗೂ ಕೇಳಿಸಿಕೊಂಡ ಕೆಟ್ಟ ಮಾತುಗಳು, ಪಿ.ಟಿ.ಮಾಸ್ಟರ್ ಯಾರು ಇಲ್ಲದ ವೇಳೆಯಲ್ಲಿ ಹುಡುಗನಾದ ವ್ಯಕ್ತಿಯನ್ನು ಲೈಂಗಿಕ ಅತ್ಯಾಚಾರಕ್ಕೆ ಬಳಸಿಕೊಂಡು ಬಾಯಿಬಿಟ್ಟರೆ ಕೊಂದುಬಿಡುತ್ತೇನೆ ಎಂಬ ಯಾರಿಗೂ ಹೇಳಲಾಗದ ಸಂಕಟ
ಇವುಗಳ ಮಧ್ಯೆ ಜಾನಪದ ಹೆಣ್ಣು ಮಕ್ಕಳ ಆಟಗಳು ತಂದ ಖುಷಿ ಇದರ ಮಧ್ಯೆ ಜೀವನ ಕಳೆದು ಹೋಯಿತು.
ಕಣ್ಣೇಮುಚ್ಚೇ ಕಾಡೇ ಗೂಡೆ ಉದ್ದಿನ ಮೂಟೆ ಉರುಳೇ ಹೋಯ್ತು ಎಂಬ ಹಾಡು. ಬಣ್ಣದ ತಗಡಿನ ತುತ್ತೂರಿ ಹಾಡು ಕುಂಟೆ ಬಿಲ್ಲೆ ಅಮಟೆ ಎಸ್ ಎಂಬ ಆಟ ಒಂದೊಂದು ನೆನಪಾಗುತ್ತಾ ಬದುಕು ನರಕವಾಗುತ್ತಾ ಸಾಗುತ್ತದೆ.
ವಯಸ್ಸಿಗೆ ಬಂದ ಮೇಲಂತೂ ಹುಡುಗಿಯ ಹಾಗೆ ಇರು ಮದುವೆ ಮಾಡುತ್ತೇನೆ ಎಂಬ ಮನೆಯವರ ಒತ್ತಾಯ. ಹುಡುಗನ ಹಾಗೆ ಇರು ಮದುವೆ ಮಾಡುತ್ತೇನೆ ಎಂಬ ಒತ್ತಾಯ. ಮನೆ ಬಿಡುವುದು ಅನಿವಾರ್ಯವಾಗುತ್ತದೆ. ಯಾರದು ಮಗುವನ್ನು ಸ್ವಂತ ಮಗು ಎಂದು ಸಾಕಿದರು ಕೂಡ ತಾನು ಯಶೋಧಳಂತೆ, ಮಗುವನ್ನು ಸಾಕುತ್ತೇನೆ ಎಂದು ಹೇಳುವ ಇವರು ಆ ಮಗುವಿಗೆ ಎದೆ ಹಾಲು ಕೊಡಲು ನಮ್ಮಿಂದ ಸಾಧ್ಯವಿಲ್ಲ ಎಂಬ ದುಃಖವನ್ನು ತಮ್ಮ ಎದೆಯಲ್ಲಿ ಎಲ್ಲ ದುಃಖಗಳೊಂದಿಗೆ ಅಡಗಿಸಿಕೊಂಡಿರುತ್ತಾರೆ.
ಹಾಗೊಂದು ವೇಳೆ ಮನೆ ಬಿಟ್ಟು ಓಡಲು ಪ್ರಾರಂಭಿಸಿದಾಗ
ದಾರಿಯಲ್ಲಿ ಅಡ್ಡ ಹಾಕಿದ ಲಾರಿ ಡ್ರೈವರ್ ಅತ್ಯಾಚಾರ ಮಾಡಲು ಯೋಚಿಸಿದಾಗ ತಪ್ಪಿಸಿಕೊಂಡು ಬೆಂಗಳೂರಿನ ತನ್ನ ಸಮುದಾಯದವರನ್ನು ಸೇರಿಕೊಳ್ಳುವುದು ಒಂದಷ್ಟು ನೆಮ್ಮದಿ ಇರುತ್ತದೆ. ಆದರೆ ತಪ್ಪಿಸಿಕೊಳ್ಳಲು ಎಲ್ಲರಿಗೂ ಭಾಗ್ಯವಿಲ್ಲ.
ಆದರೂ ಮನಸ್ಸಿನ ಮೂಲೆಯಲ್ಲಿ ಎಲ್ಲಿ ಕಳೆದು ಹೋಯಿತು ನನ್ನ ಹಾಡು ನನ್ನ ಧ್ವನಿ ನನ್ನ ಶರೀರ ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು ಕೇವಲ ಅದು ಹಾಡಲ್ಲ ಮನದ ನೋವಿನ ಗೀತೆ. ಈ ರೀತಿಯ ಗೀತೆಯನ್ನು ಪ್ರತಿಯೊಬ್ಬರೂ ತಮ್ಮದೇ ಪ್ರೇಮ ಪ್ರಸಂಗದಿಂದ ಪ್ರಾರಂಭಿಸಿ ಕೊನೆಗೆ ಗಂಡನ ಸಾವಿನೊಂದಿಗೆ ದುರಂತವಾದ ಕಥೆ ಹೇಳುತ್ತಾರೆ. ಬಾಂಬೆಯಿಂದ ಬಂದ ಜೋಡಿಯೊಂದು ಬೆಂಗಳೂರಿನಲ್ಲಿ ಸುಖವಾಗಿ ಜೀವಿಸುತ್ತಿದ್ದಾಗ ರೌಡಿಗಳಿಂದ ಗಂಡನ ಎದುರಿಗೆ ಅತ್ಯಾಚಾರವಾಗುತ್ತದೆ ಮತ್ತು ಈಕೆ ತೃತೀಯ ಲಿಂಗಿ ಎಂದು ತಿಳಿದು ಅವಳ ಗರ್ಭಕೋಶವನ್ನು ನೋಡೋಣ ಎಂದು ಅದರ ಮೇಲೆ ಅತ್ಯಾಚಾರ ಮಾಡುತ್ತಾರೆ ಆದರೆ ಗಂಡನಾದವನು ಇದೊಂದು ಕನಸು ಎಂದು ಮರೆತುಬಿಡು ಎಂದು ಹೇಳಿ ಮುಂದೆ ಹತ್ತು ವರ್ಷ ಸಂತೋಷದ ಜೀವನ ಕಳೆದು ಆತ ಸಾಯುತ್ತಾನೆ. ಇದೇ ರೀತಿ ಅನುಮಾನದಿಂದ ಗಂಡ ಬಿಡುವುದು ಸಮಾಜಕ್ಕೆ ಹೆದರಿ ಬಿಡುವುದು. ಹಳ್ಳಿಯ ಮನೆಯಲ್ಲಿ ಇವಳ ಮೇಲೆ ಪ್ರೀತಿ ತೋರಿಸಿ ಕೊನೆಗೆ ಬೇರೆ ಹುಡುಗಿಯನ್ನು ಮದುವೆಯಾಗುತ್ತಾನೆ ಎಂದು ಗೊತ್ತಾದಾಗ,ಹುಡುಗಿ ಮನೆಗೆ ಹೋಗಿ ಎಲ್ಲ ವಿಷಯ ಹೇಳಿದಾಗ ಹುಡುಗನ ತಂದೆ ತಾಯಿ ಬಂದು ಹೀಗೆ ಕೈ ಮುಗಿದು ನಮ್ಮ ಮನೆತನ ಉಳಿಸಿಕೊಡು ಎಂದಾಗ ಮಾನವೀಯತೆಯಿಂದ ಆ ಹುಡುಗನನ್ನು ಬಿಟ್ಟಿದ್ದು, ಕೊನೆಗೂ ಈಕೆಯ ದುಡ್ಡನ್ನು ಅಪೇಕ್ಷೆ ಮಾಡುವ ಮನೆಯವರು ಹಬ್ಬ ಹುಣ್ಣಿಮೆಗೆ ಈಕೆ ಮನೆಗೆ ಬರುವುದನ್ನು ತಡೆಹಿಡಿಯುತ್ತಾರೆ
ಒಂದು ವೇಳೆ ಬರುವುದಾದರೆ ರಾತ್ರಿ ಬಂದು ಬೆಳಗ್ಗೆ ಆಗುವುದರ ಒಳಗೆ ಆಕೆ ಪುನಃ ಬೆಂಗಳೂರಿಗೆ ಹೋಗಬೇಕು ಇಂಥ ಬದುಕನ್ನು ಅನುಸರಿಸುತ್ತಾ ಕೊನೆಗೆ ತಾಯಿಯಾದವಳು ಇಂಥವಳನ್ನು ಒಪ್ಪಿ ಮನೆಗೆ ಸೇರಿಸುತ್ತಾರೆ. ತಾಯಿ ಸತ್ತಾಗ ಏಕೆ ನೋಡಲು ಬಂದಾಗ ಪ್ರಾರಂಭದಲ್ಲಿ ತಿರಸ್ಕರಿಸಿದ ಹಳ್ಳಿಯ ಪಂಚಾಯಿತಿದಾರರು
ಕ್ರಮೇಣ ಮನೆಯವರೆ ಒಪ್ಪಿದಾಗ ನಮ್ಮದೇನು ಎಂದು ತಾಯಿ ಅಂತ್ಯ ಸಂಸ್ಕಾರ ಮಾಡಲು ಬಿಟ್ಟ ಮೇಲೆ ಕೊನೆಗೂ ಪ್ರೇಕ್ಷಕರಿಗೆ ಒಂದು ಪ್ರಶ್ನೆಯನ್ನು ಇವರು ಎಸೆಯುತ್ತಾರೆ.
ಮನೆಯವರು ಒಪ್ಪಿಕೊಂಡರು ಆದರೆ ಸಮಾಜ ಯಾಕೆ? ಒಪ್ಪುವುದಿಲ್ಲ? ಕೊನೆಗೂ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ನಾಟಕವಾಗಿ ತೆಗೆದುಕೊಂಡಾಗ ರಿಯಾಲಿಟಿಗೆ ಬಹಳ ಹತ್ತಿರವಾಗಿ ನಾಟಕ ಇದ್ದರೂ ಕೂಡ ಈ ಸಮುದಾಯದವರ ಸಂಸ್ಕೃತಿಯನ್ನು ತೋರಿಸುವ ಅವರ ಸಂತೋಷ ಮಾತಾ ದೇವತೆ ಮತ್ತು ಅವರದೇ ಆದಂತ ವಿಶಿಷ್ಟವಾದಂತ ನೃತ್ಯ ಮತ್ತು ತಾವು ಪೂಜೆ ಮಾಡಿ ಹಿಂತಿರುಗಿ ಕೊಡುವ ಒಂದು ರೂಪಾಯಿ ಕಾಯಿನ್ ನಂಬಿಕೆ ಇವೆಲ್ಲವನ್ನು ನಿರ್ದೇಶಕರಾದವರು ಸ್ವಲ್ಪವಾದರೂ ತೋರಿಸಿದ್ದರೆ ನಾಟಕ
ಸುಂದರವಾಗಿ ಮೂಡಿ ಬರುತ್ತಿತ್ತು. ಒಟ್ಟಿನಲ್ಲಿ ಇಂತಹ ಒಂದು ನಾಟಕವನ್ನು ನಮ್ಮ ಮುಂದೆ ಪ್ರದರ್ಶಿಸಿದ ಈ ತಂಡದವರಿಗೆ ಅದರ ಸಮುದಾಯದವರಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಾಗೂ ರಂಗಾಯಣಕ್ಕೆ ಶಿವಮೊಗ್ಗದ ಪ್ರೇಕ್ಷಕರ ಪರವಾಗಿ ಧನ್ಯವಾದಗಳು.
ಡಾ.ಕೆ.ಜಿ.ವೆಂಕಟೇಶ್ ,ಕ್ರಾಂತಿ ಕಿಡಿ, ಶಿವಮೊಗ್ಗ.