Posted on 31-03-2025 |
Share: Facebook | X | Whatsapp | Instagram
ಹಿಂದೂಗಳ ಯುಗಾದಿ ಮತ್ತು ಮುಸ್ಲಿಮರ ರಂಜಾನ್ ಎರಡು ಹಬ್ಬಗಳು ಪ್ರಕೃತಿಯನ್ನು ಅನುಸರಿಸಿ ಮಾಡುವ ಹಬ್ಬಗಳಾಗಿದೆ. ಮನುಷ್ಯ ಮೂಲತವಾಗಿ ಕಾಡಿನಲ್ಲಿ ಹುಟ್ಟಿ ಬೆಳೆದು ತನ್ನದಾದ ವಿಶಿಷ್ಟ ಪರಂಪರೆಯನ್ನು ಸಂಸ್ಕೃತಿಯನ್ನು ಹೊಂದಿ ನಗರವನ್ನು ಕಟ್ಟಿಕೊಂಡು ನಾಗರಿಕನಾದ. ಆದರೂ ತನ್ನ ಅಸ್ತಿತ್ವಕ್ಕೆ ಮೂಲ ಕಾರಣವಾದ ಪ್ರಕೃತಿಯನ್ನು ಮರೆಯಲಿಲ್ಲ ಆದ್ದರಿಂದ ಹಿಂದುಗಳು ಯುಗದ ಆದಿ ಅಂದರೆ ಮೂಲ ಪರಿಸರವನ್ನು ನೆನಪು ಮಾಡಿಕೊಳ್ಳುತ್ತಾ ಹೊಸದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಒಂದರ ಮೊದಲು ಮತ್ತೊಂದರ ಕೊನೆ ಅಂದರೆ ಆದಿ ಮತ್ತು ಅಂತ್ಯ ಪ್ರಕೃತಿಯಂತೆ ಗುಂಡಾಗಿರುತ್ತದೆ. ಹಾಗಾಗಿ ಇದಕ್ಕೆ ತುದಿ ಬುಡ ಎನ್ನುವುದಿಲ್ಲ ಒಂದು ಚಕ್ರ ಏಳು ಬೀಳುಗಳಿದ್ದಂತೆ ಜೀವನವು ತಿರುಗುತ್ತಾ ನಡೆಯುತ್ತದೆ. ಮನುಷ್ಯನ ಹಾಗೆ ಪ್ರಕೃತಿಯಲ್ಲು ಕೂಡ ಹಗಲು ರಾತ್ರಿ ಋತುಗಳ ಆದಿ ಅಂತ್ಯ ನಡೆಯುತ್ತಲೇ ಇರುತ್ತದೆ. ಮನುಷ್ಯನಲ್ಲಿಯೂ ಸುಖ ದುಃಖ ಸೋಲು ಗೆಲುವು ಹುಟ್ಟು ಸಾವು ಕಹಿ ಸಿಹಿ ಪ್ರೀತಿ ದ್ವೇಷ ಬರುತ್ತಲೇ ಇರುತ್ತದೆ ಇವೆಲ್ಲವನ್ನು ಸಮಾನವಾಗಿ ಸ್ವೀಕರಿಸಿ ಬದುಕಿರುವಷ್ಟು ದಿನ ಮುನ್ನಡೆಯಬೇಕು ಎನ್ನುವುದೇ ಯುಗಾದಿ ಹಬ್ಬದ ಸಂದೇಶ.
ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುತ್ತಾರೆ. ಅದರಲ್ಲಿ ಇರುವುದು ನಮ್ಮ ಮುಂದಿನ ವರ್ಷದಲ್ಲಿ ಪ್ರಕೃತಿ ಹೇಗಿರುತ್ತದೆ ಎಷ್ಟು ಮಳೆ ಬೀಳುತ್ತದೆ ಬಿಸಿಲು ಯಾವಾಗ ಬರುತ್ತದೆ ಎನ್ನುವುದರ ಅಧ್ಯಯನವೇ ಆಗಿದೆ ಹಾಗಾಗಿ ಮನುಷ್ಯನ ಜೀವನ ಬೇವು ಮತ್ತು ಬೆಲ್ಲ ಬಿದ್ದಂತೆ ನಮಗೆ ಪೂರಕವಾದ ಮಾರಕವಾದ ಎರಡು ಕೆಲಸಗಳು ನಡೆಯುತ್ತಲೇ ಇರುತ್ತವೆ. ಹೀಗೆ ಮನುಷ್ಯ ತನ್ನ ಒಂದು ಸಂಸ್ಕೃತಿಯನ್ನೇ ವಿಸ್ತರಿಸಿ ಅದಕ್ಕೆ ಬೇಲಿ ಹಾಕಿಕೊಂಡು ಅದನ್ನು ತನ್ನದೇ ಧರ್ಮ ಎಂದು ಗುರುತಿಸಿಕೊಂಡ. ಧಾರಣಾಥ್ ಯತಿಹಿ ಧರ್ಮಃ ಅಂದರೆ ಯಾವುದನ್ನು ಅನುಸರಿಸುತ್ತಾನೋ ಅದೇ ಧರ್ಮ ಅದೇ ರೀತಿ ಮಹಮ್ಮದ್ ಪೈಗಂಬರ್ ರವರು ಕೂಡ ಮನುಷ್ಯನ ನಿಜವಾದ ಉದ್ದೇಶ ಈಡೇರಬೇಕಾದರೆ ಆತ ಸಹೋದರತೆ ಉದಾರತೆ ಮಾನವೀಯತೆ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಮನುಷ್ಯ ಮನುಷ್ಯರಲ್ಲಿ ದ್ವೇಷ ಅಸೂಯೆ ಇರಬಾರದು ನಮ್ಮ ನಮ್ಮ ಸಂಬಂಧಗಳು ಗಟ್ಟಿಯಾಗಿ ಇರಬೇಕು ಅದಕ್ಕಾಗಿ ಮನುಷ್ಯರು ಒಟ್ಟಾಗಿರಬೇಕು ಸಂತೋಷ ದುಃಖವನ್ನು ಎಲ್ಲರೂ ಒಟ್ಟಿಗೆ ಹಂಚಿಕೊಳ್ಳಬೇಕು ಅನಾಥರಿಗೆ ದುರ್ಬಲರಿಗೆ ಸಹಾಯ ಮಾಡಬೇಕು. ನಮ್ಮ ನೆರೆಮನೆಯವನು ಹಸಿದಿರುವಾಗ ನಾವು ಊಟವನ್ನು ಮಾಡಬಾರದು ಎಂದು ಪ್ರವಾದಿಯವರು ಹೇಳಿದ್ದರು. ಈದ್ ಉಲ್ ಫಿತ್ರ್ ಎಂದರೆ ಉಪವಾಸವನ್ನು ಅಂತ್ಯಗೊಳಿಸುವ ಶಬ್ದ.
ಹಿಂದುಗಳಲ್ಲಿ ಮುಸ್ಲಿಮರಲ್ಲಿ ಉಪವಾಸಕ್ಕೆ ಬಹಳ ಮಹತ್ವವಾದ ಸ್ಥಾನವಿದೆ. ಲೌಕಿಕ ಅರ್ಥದಲ್ಲಿ ಆಹಾರವನ್ನು ಸೇವಿಸದೆ ಇರುವುದು ಎಂದು ಇದ್ದರೂ ಕೂಡ ಉಪವಾಸ ಅಂದರೆ ಸಹವಾಸ ಎಂದರ್ಥ. ಅಂದರೆ ಮನುಷ್ಯ ತಾನು ನಂಬಿರುವ ಯಾವುದೋ ಒಂದು ಶಕ್ತಿಯನ್ನು ದೇವರು ಅಲ್ಲ ಎಂದು ಕರೆದುಕೊಳ್ಳುತ್ತಾನೋ ಆತನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆತನನ್ನು ನೆನೆಯುವುದು. ಹಾಗಾಗಿ ದೇವರೊಡನೆ ವಾಸ ಮಾಡುವುದೇ ಉಪವಾಸ. ಹಿಂದುಗಳು ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ವಾರಕ್ಕೊಮ್ಮೆ ಅವರವರ ಸಂಸ್ಕೃತಿಯ ಅನುಸಾರ ಇದನ್ನು ಆಚರಿಸುತ್ತಾರೆ. ಅವರಲ್ಲಿ ಶಿವರಾತ್ರಿಯ ಉಪವಾಸ ಮಹತ್ವವಾದದ್ದು. ಆ ಶಿವನನ್ನು ಚಂದ್ರಶೇಖರ ಎಂದು ಕರೆಯುತ್ತಾರೆ ಏಕೆಂದರೆ ಚಂದ್ರ ಆತನ ತಲೆಯಲ್ಲಿ ಇರುತ್ತಾನೆ ಎಂದು ಹಿಂದುಗಳ ನಂಬಿಕೆಯಾಗಿದೆ. ಅಂತಹ ಚಂದ್ರನನ್ನು ನೋಡಿ ತಮ್ಮ ಉಪವಾಸ ಪ್ರಾರಂಭಿಸುವ ಮತ್ತು ಬಿಡುವ ಕೆಲಸವನ್ನು ಮುಸ್ಲಿಮರು ಮಾಡುತ್ತಾರೆ.
ಈ ಹಬ್ಬದ ಮೂಲ ಆಶಯ ನಮ್ಮ ಕೆಟ್ಟ ಗುಣಗಳನ್ನಲ್ಲ ಕೈ ಬಿಟ್ಟು ದೇವರಿಗೆ ಹತ್ತಿರವಾಗುವುದು ಆ ದಿನ ಯಾರು ಹಸಿವಿನಿಂದ ಇರಬಾರದು ಎಲ್ಲರೊಂದಿಗೆ ಹಂಚಿ ತಿಂದು ಹಬ್ಬದ ಖುಷಿಯನ್ನು ಕಾಣಬೇಕು ಯಾವುದೇ ಸಂಭ್ರಮ ನಮ್ಮದು ಮಾತ್ರವಲ್ಲದೆ ನಮ್ಮೆಲ್ಲರದು ಆಗಬೇಕು ಎನ್ನುವುದೇ ಎರಡು ಹಬ್ಬಗಳ ಆಶಯ. ಹಿಂದೂ ಮತ್ತು ಮುಸ್ಲಿಮರ ಐಕ್ಯತೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇದ್ದರೂ ಕೂಡ ಅದನ್ನು ತೊರೆದು ಜೀವನದಲ್ಲಿ ಬರುವ ಸಿಹಿಕಹಿಗಳನ್ನ ಹೇಗೆ ಸಮಾನವಾಗಿ ಸ್ವೀಕರಿಸುತ್ತೇವೆಯೋ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು ಎನ್ನುವುದೇ ಈ ಹಬ್ಬಗಳ ಸಂದೇಶ.