Posted on 25-03-2025 |
Share: Facebook | X | Whatsapp | Instagram
ಶಿವಮೊಗ್ಗ ಮಾರ್ಚ್ 24ರಂದು ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಧಾರವಾಡದ ರಂಗಾಯಣದ ಕಲಾವಿದರು ಅಭಿನಯಿಸಿದ ನಾಟಕ ಸತ್ತವರ ನೆರಳು.
ನದಿ ಮೂಲ ಸ್ತ್ರೀ ಮೂಲ ಹಾಗೆ ಗುರು ಮೂಲವನ್ನು ಹುಡುಕುವುದಕ್ಕೆ ಹೋಗಬಾರದು ಒಂದು ವೇಳೆ ಹುಡುಕಿದರೆ ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂಬ ಆಶಯ ಹೊಂದಿದ ನಾಟಕವಿದು. ಜಡಭರತರ ಸತ್ತವರ ನೆರಳು ನಾಟಕ ಧರ್ಮ ಮತ್ತು ಅದಕ್ಕೆ ಜೋತು ಬಿದ್ದ ಕಟ್ಟುಪಾಡಿನ ಮೂಢನಂಬಿಕೆಯ ಸುತ್ತ ಇರುವ ದ್ವಂದ್ವಗಳ ವಿಚಾರದ ಕಥೆಯನ್ನು ಹೊಂದಿದೆ.
ವಿದ್ಯಾನಿಧಿ ತೀರ್ಥರು ಮಠಾಧಿಪತಿ ಆಗಿದ್ದಾಗ ದಿವಾನರಾಗಿದ್ದವರು ಕೃಷ್ಣಾಚಾರ್ಯರು ವಿದ್ಯಾನಿಧಿ ಗುರುಗಳು ಸಂಪೂರ್ಣ ಆಧ್ಯಾತ್ಮಿಕ ವ್ಯವಹಾರದಲ್ಲಿ ತೊಡಗಿದರೆ ಕೃಷ್ಣಾಚಾರ್ಯರು ಲೌಕಿಕ ವ್ಯವಹಾರದಲ್ಲಿ ತೊಡಗಿದ್ದರು. ಗುರುಗಳ ಮರಣದ ನಂತರ ಸಂಪೂರ್ಣ ಮಠ ತನ್ನ ಕೈವಶದಲ್ಲಿಯೇ ಇರಬೇಕೆಂದು ಯೋಚಿಸಿದ ಕೃಷ್ಣಾಚಾರ್ಯರು ನಾರಾಯಣ ಎಂಬ ಬಡವನಾದ ಆತನ ಹೆಂಡತಿ ಮಗು ಹೆತ್ತಿದ್ದರು ಅದನ್ನು ಕೂಡ ನೋಡದಂತೆ ಮಾಡಿ ಬಡಬ್ರಾಹ್ಮಣ ಹುಡುಗನನ್ನು ಎಳೆದು ತಂದು ಮಠದಲ್ಲಿ ಪೀಠಾಧಿಪತಿಯನ್ನಾಗಿ ಮಾಡಿದ್ದರು.
ಹುಲಗಪ್ಪ ಕಟ್ಟಿಮನಿ ಈ ನಾಟಕವನ್ನು ನಿರ್ದೇಶನ ಮಾಡಿದ್ದು ಧಾರವಾಡ ಕನ್ನಡದ ಭಾಷೆಯಲ್ಲಿ ಮಠದ ಬ್ರಾಹ್ಮಣ್ಯ ವಾದವನ್ನು ಅಲ್ಲಗಳೆಯುತ್ತಲೇ ನಾಟಕ ನಮ್ಮನ್ನು ವಿಚಾರಕ್ಕೆ ಹಚ್ಚುತ್ತದೆ.
ಸಂಪೂರ್ಣ ನಾಟಕ ನಾಲ್ಕು ಕಂಬಗಳ ನಡುವೆ ಇರುವ ಗುರುಪೀಠದ ಸುತ್ತಲೇ ನಡೆಯುತ್ತದೆ. ಕಣ್ಣು ಕಾಣದ ಒಬ್ಬ ಭಿಕ್ಷುಕ ಉರಿಯುವ ಲಾಠಿಯನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೊಂದು ಕೈಯಿಂದ ತನ್ನ ಹೆಂಡತಿಯ ಹೆಗಲನ್ನು ಹಿಡಿದುಕೊಂಡು ತತ್ವಪದಗಳನ್ನು ಹೇಳುತ್ತಾ ಬರುವಾಗ ಆತನ ಹೆಂಡತಿ ಹಾರ್ಮೋನಿಯಂ ತನ್ನ ಕುತ್ತಿಗೆಯಲ್ಲಿ ಹಾಕಿಕೊಂಡು ಅದನ್ನು ಬಾರಿಸುತ್ತಾ ಗಂಡನಿಗೆ ದಾರಿ ತೋರಿಸುತ್ತಾಳೆ. ಈ ತತ್ವಪದದಲ್ಲಿಯೇ ನಿರ್ದೇಶಕರು ಬದುಕಿನ ಅರ್ಥ ತಿಳಿಸುತ್ತಾ ಹೋಗುತ್ತಾರೆ..
ಜರ್ಮನ್ ತರುಣಿ ಒಬ್ಬಳು ಸಂಸ್ಕೃತ ವಿದ್ವಾಂಸಳಾಗಿದ್ದು ಅವಳು ನ್ಯಾಯ ಸಿದ್ಧಾಂತವನ್ನು ಕಲಿತು ತನ್ನೊಂದಿಗೆ ವಾದ ಮಾಡಲು ಸಾಮರ್ಥ್ಯ ಇರುವ ಪಂಡಿತರನ್ನು ಹುಡುಕುತ್ತಾ ಮಠಕ್ಕೆ ತನ್ನ ತಂದೆಯೊಂದಿಗೆ ಬರುತ್ತಾಳೆ. ಆದರೆ ಗುರುಗಳಾಗಲಿ ಅಥವಾ ದಿವಾನರಾಗಲಿ ಅವಳೊಂದಿಗೆ ನಡೆದ ವಾದದಲ್ಲಿ ಗೆಲ್ಲಲು ಸಾಧ್ಯವಾಗದೆ ಅರ್ಧಕ್ಕೆ ವಾದವನ್ನು ನಿಲ್ಲಿಸಿ ದಿವಾನರು ಪೂಜೆ ನೆಪದಿಂದ ಹೊರ ಹೋಗುತ್ತಾರೆ.
ಹೆಂಡತಿಯನ್ನು ಬಿಟ್ಟು ಮಠಾಧಿಪತಿ ಆಗಿರುವ ಈ ಯುವಕ ಗುಣನಿಧಿ ತೀರ್ಥ ಅವಳ ಆಕರ್ಷಣೆಗೆ ಬಿದ್ದು ತಾನು ಪುನಃ ಸಂಸಾರಿಯಾಗಲು ಬಯಸುತ್ತಾನೆ ಆದರೆ ಆತನ ಎಲ್ಲ ಬಯಕೆಗಳಿಗೆ ಕಡಿವಾಣ ಹಾಕಿದ ಮಠದ ದಿವಾನ ಇದು ಒಳ ಬರುವುದಕ್ಕೆ ಮಾತ್ರ ಬಾಗಿಲಿರುವ ಮಠ ಹೊರ ಹೋಗುವುದಕ್ಕೆ ಇದರಿಂದ ಸಾಧ್ಯವೇ ಇಲ್ಲ ಎಂದು ಆತನನ್ನು ತಡೆಯುತ್ತಾರೆ. ಈ ಸಂದರ್ಭದಲ್ಲಿ ಮಠದ ಕಾಷಾಯ ವಸ್ತ್ರ
ಪಂಚೆ ಎಲ್ಲವನ್ನು ತೆಗೆದು ಕೇವಲ ಕೌಪೀನದಾರಿ ಆಗಿರುವ ಈ ನಟನ ಪಾತ್ರ ಅಭಿನಯ ಅಮೋಘವಾದದ್ದು, ಮಠದಿಂದ ಬೇಸತ್ತು ಹುಚ್ಚನಂತಾಗಿದ್ದ ಅಳಪುಡಿ ಶೀನ ಎಂಬ ಪಾತ್ರವಂತು ಈ ಮಠ ಈ ಧರ್ಮ ಈ ಸಂಪ್ರದಾಯ ಈ ತಪಶಕ್ತಿ ಈ ಬೃಂದಾವನ ಎಲ್ಲವೂ ಸುಳ್ಳು ನಾರಾಯಣ ನೀನು ಓಡಿ ಹೋಗು ಬದುಕುತ್ತೀಯಾ ಎಂದು ಹೇಳುವ ಮಾತು ಮಠದ ಹೀನ ಆಚರಣೆ ಮನುಷ್ಯವಿರೋಧಿ ಸಂಸ್ಕಾರಗಳನ್ನು ತೋರಿಸುತ್ತದೆ.
ಅಂತೂ ದಿವಾನರ ಕುತ್ಸಿತ ಬುದ್ಧಿಗೆ ಬಲಿಯಾದ ನಾರಾಯಣ ಜರ್ಮನಿಯ ಹುಡುಗಿಯನ್ನು ವಾದದಲ್ಲಿ ಸೋಲಿಸಿ ಆಕೆಯೊಂದಿಗೆ ಕಾಶಿಗೆ ಹೋಗಿ ಅಲ್ಲಿ ಗಂಗಾನದಿ ತೀರದಲ್ಲಿ ತಪಸ್ಸನ್ನು ಆಚರಿಸುವಾಗ ಗಂಗಾತಾಯಿ ಆತನನ್ನು ಅಪ್ಪಿಕೊಂಡು ಸ್ವರ್ಗಕ್ಕೆ ಕರೆದೊಯ್ದಳು , ಎಂಬ ಸುದ್ದಿ ಹರಿಕತೆ ದಾಸನ ಮುಖಾಂತರ ಊರಲ್ಲಿ ಹಬ್ಬುತ್ತದೆ. ಗುಣನಿಧಿ ತೀರ್ಥರ ಬೃಂದಾವನ ಮಠದಲ್ಲಿದ್ದು ಸಂಪೂರ್ಣ ಅಧಿಕಾರ ಕೃಷ್ಣಾಚಾರ್ಯರ ಪಾಲಾಗುತ್ತದೆ.
ಈ ಮಧ್ಯೆ ಒಂದು ದಿನ ನಾರಾಯಣ ಮಠದಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನನ್ನು ಗುರುತಿಸಿದ ಕೃಷ್ಣಾಚಾರ್ಯರು ನೀನು ಈ ಊರಿನ ಸುತ್ತ ತಿರುಗಿ ನಾನು ನಾರಾಯಣ ಎಂದು ಹೇಳಿದರೆ ಜನ ನಿನ್ನನ್ನು ಹುಚ್ಚ ಎನ್ನುತ್ತಾರೆ. ಏಕೆಂದರೆ ಮೂಢನಂಬಿಕೆಯಾದರೂ ಧರ್ಮದ ನಂಬಿಕೆ ಗಟ್ಟಿ ಉಳಿಯುತ್ತದೆ. ಬದುಕಬೇಕೆಂದರೆ ಬೆಳಿಗ್ಗೆ ಪೂಜೆಯ ವೇಳೆಗಾಗಲೇ ನೀನು ಊರು ಬಿಟ್ಟು ಹೋಗಬೇಕು ಎಂದು ತಾಕೀತು ಮಾಡುತ್ತಾರೆ ನಾರಾಯಣ ಹುಚ್ಚನಾಗಿಯೇ ಉಳಿಯುತ್ತಾನೆ.
ಪ್ರೇಕ್ಷಕರ ಮನಸ್ಸು ದ್ವಂದ್ವ ತಾಕಲಾಟ ಅರ್ಥಮಾಡಿಕೊಳ್ಳದ ಸ್ಥಿತಿಯಲ್ಲಿ ಗೊಂದಲದ ಗೂಡಾಗುತ್ತದೆ.
ಧಾರವಾಡದ ರಂಗಾಯಣ ತಂಡದ ಪ್ರಿಯಾಂಕ ಸಿದ್ದಾರ್ಥ ಅಕ್ಷತಾ ಅಂಬಿಕಾ ಕ್ಷಮಾ ವಿಜಯೇಂದ್ರ ರಾಜು ಹರೀಶ್ ದೊಡ್ಡಮನಿ ಪ್ರಸಾದ ಕಂಬಳಿ ಸಂತು ಕೊಪ್ಪಳ ಆನಂದ ಕುಲಕರ್ಣಿ ಎಲ್ಲರ ಅಭಿನಯದಿಂದ ಬಹಳ ದಿನದ ನಂತರ ಒಂದು ಉತ್ತಮವಾದ ನಾಟಕ ನೋಡಿದ ಸಾರ್ಥಕ ಭಾವನೆ ಬಂದಿತು. ರಾಘವ ಕಮ್ಮಾರ್ ರವರ ಸಂಗೀತ ನಾಟಕಕ್ಕೆ ಕಳೆತಂದಿತು.
ಕುರುಡ ಮತ್ತು ಆತನ ಹೆಂಡತಿ ತತ್ವಪದವನ್ನು ಹೇಳುವಾಗ ಪಕ್ಕಾ ವಾದ್ಯದ ಅಬ್ಬರ ಹೆಚ್ಚಾಗಿ ಮೂಲ ಹಾಡಿನ ಸ್ವಾಧ ಕೇಳುತ್ತಿರಲಿಲ್ಲ. ಪ್ರಸಾದನ ಅಭಿನಯ ಬೆಳಕು ರಂಗಸಜ್ಜಿಗೆ ಉತ್ತಮವಾಗಿದ್ದು ಶಿವಮೊಗ್ಗದ ಗೌರಿಶಂಕರ್ ನಾಟಕದ ಪೀಠಾರೋಹಣ ನಾಟಕದ ಕತೆಯ ನೆನಪನ್ನು ಮತ್ತೊಮ್ಮೆ ಮೂಡಿಸಿತು.(ಇದು ಪೀಠಾರೋಹಣಕ್ಕಿಂತ 30 ವರ್ಷಗಳ ಹಳೆಯ ನಾಟಕ) ಆದರೂ 30ಕ್ಕೂ ಹೆಚ್ಚಿನ ಜನ ಇರುವ ಶಿವಮೊಗ್ಗದ ಯುವ ನಾಟಕ ನಿರ್ದೇಶಕರು ಅರ್ಧದಷ್ಟು ಜನರಾದರೂ ನಾಟಕಕ್ಕೆ ಬಂದಿದ್ದರೆ ಚೆನ್ನಾಗಿರುತ್ತಿತ್ತು.