‘ದೇಸಿ ಸಂಸ್ಕೃತಿ’ಯ ನೂತನ ಮಳಿಗೆಯ ಉದ್ಘಾಟನೆ
Social Program
Education
Posted on 24-03-2025 |
Share:
Facebook |
X |
Whatsapp
|
Instagram
‘ಆಧುನಿಕತೆಯ ವಿಕಾರಗಳಿಗೆ ದೇಸಿ ಉತ್ಪನ್ನಗಳ ಬಳಕೆಯೇ ಮದ್ದು’ ಅಂಬಾರ ಚಿತ್ತಾರದ ಮುಖ್ಯಸ್ಥ ಎನ್. ಎಂ. ಕುಲಕರ್ಣಿ ಅಭಿಮತ
ಪರಿಸರ ಮತ್ತು ನಮ್ಮ ಆರೋಗ್ಯಕ್ಕೆ ಕಂಟಕವಾಗಿರುವ ಕೆಲವು ಆಧುನಿಕತೆಯ ವಿಕಾರಗಳನ್ನು ಸಿನಿಕತನದ ಗೊಣಗಾಟಗಳಿಂದ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ದೈನಂದಿನ ಬದುಕಿನಲ್ಲಿ ನಿಸರ್ಗಕ್ಕೆ ಹಾನಿ ಮಾಡದೆ ಸ್ಥಳೀಯವಾಗಿ ತಯಾರಾದ ಉತ್ಪನ್ನಗಳನ್ನು ಬಳಸುವುದೇ ಇದಕ್ಕಿರುವ ಪರ್ಯಾಯ ಮಾರ್ಗ ಎಂದು ‘ಅಂಬಾರ ಚಿತ್ತಾರ’ ಕರಕುಶಲ ಸಿದ್ಧ ಉಡುಪು ಘಟಕದ ಮುಖ್ಯಸ್ಥರಾದ ಶ್ರೀ ಎನ್. ಎಂ. ಕುಲಕರ್ಣಿ ಅವರು ಪ್ರತಿಪಾದಿಸಿದರು. ನಗರದಲ್ಲಿ ಆರಂಭವಾದ ದೇಸಿ ಉತ್ಪನ್ನಗಳ ಕೇಂದ್ರವಾದ “ದೇಸಿ ಸಂಸ್ಕೃತಿ”ಯ ನೂತನ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಜನರು ಮತ್ತೆ ದೇಸಿ ಉತ್ಪನ್ನಗಳತ್ತ ಮರಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಆಡಳಿತ ಸೇವೆಯ ವಿಶ್ರಾಂತ ಅಧಿಕಾರಿಗಳಾದ ಶ್ರೀ ಮಂಜುನಾಥ್ ನಾಯಕ್ ಅವರು ಮಾತನಾಡಿ ಕೈಗಾರೀಕರಣದ ನಂತರ ದೇಸಿ ಉತ್ಪನ್ನಗಳ ಉದ್ಯಮ ಕುಸಿದಿತ್ತು. ಆದರೆ ಈಗ ಅದು ಚೇತರಿಸಿಕೊಂಡಿದೆ. ಭಾರತದ ದೇಸಿ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಇದನ್ನು ಪೂರೈಸುವುದರ ಮೂಲಕ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದರು.
“ದೇಸಿ ಸಂಸ್ಕೃತಿ”ಯ ಸಂಸ್ಥಾಪಕ ಡಾ.ಸರ್ಜಾಶಂಕರ ಹರಳಿಮಠ ಮಾತನಾಡಿ, “ದೇಸಿ ಸಂಸ್ಕೃತಿ” ಎನ್ನುವುದು ಕೇವಲ ವಸ್ತುಗಳಿಗೆ ಸಂಬಂಧಪಟ್ಟದ್ದಲ್ಲ. ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳನ್ನು ಬಳಸಿದಾಕ್ಷಣ ನಾವು ದೇಸಿ ಸಂಸ್ಕೃತಿಯ ರಕ್ಷಕರು ಆಗಲು ಸಾಧ್ಯವಿಲ್ಲ. ಹತ್ತು ಹಲವು ಜಾತಿ, ಧರ್ಮಗಳಿರುವ ಈ ನಾಡಿನಲ್ಲಿ, ಪರಸ್ಪರರನ್ನು ಗೌರವಿಸುತ್ತ, ಸಹಿಷ್ಣುತೆಯಿಂದ ಬಾಳುವುದು ದೇಸಿ ಸಂಸ್ಕೃತಿ ಎಂದರು. ಕಾರ್ಯಕ್ರಮದಲ್ಲಿ ಲೇಖಕರಾದ ಡಾ.ರಾಜೇಂದ್ರ ಬುರುಡಿಕಟ್ಟಿ, ಪ್ರಾಧ್ಯಾಪಕ ಡಾ.ಸುರೇಶ್, ಡಾ.ಕವಿತ, ಡಾ.ಆಶಾ ಹಾಜರಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಡಾ.ಕಲ್ಪನ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.