ಮಾನವೀಯ ಮೌಲ್ಯಗಳ ಕೊಂಡಿ ಎ.ಪಿ ರಾಮಪ್ಪ

Deth News Taluk

Posted on 22-03-2025 |

Share: Facebook | X | Whatsapp | Instagram


ಮಾನವೀಯ  ಮೌಲ್ಯಗಳ ಕೊಂಡಿ ಎ.ಪಿ ರಾಮಪ್ಪ

   ತೀರ್ಥಹಳ್ಳಿಯ  ಪ್ರಸಕ್ತ  ಘಟ್ಟದ ಸಾರ್ವಜನಿಕ ಬದುಕಿನಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಇದ್ದರೆ ಅದು ಎ.ಪಿ ರಾಮಪ್ಪನವರದು ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು. ಎ.ಪಿ ರಾಮಪ್ಪನವರು ತಮ್ಮ ಎಂಬತ್ತೆಂಟು ವರ್ಷಗಳ ತುಂಬು ಜೀವನದಲ್ಲಿ ಸಣ್ಣ ಕಪ್ಪು ಚುಕ್ಕೆಗೂ ಅವಕಾಶವಿಲ್ಲದಂತೆ ಶಿಕ್ಷಕ ವೃತ್ತಿ  ಹಾಗೂ ಸಮಾಜವಾದಿ ತತ್ವಗಳಿಗೆ ಜೀವ ತುಂಬುತ್ತಾ ನಡೆದವರು..

ದಿವಂಗತರ ಜೊತೆಗಿನ ಒಂದಷ್ಟು ವರ್ಷಗಳ ನನ್ನ ಒಡನಾಟದಲ್ಲಿ ಹತ್ತಾರು ಮೌಲ್ಯಗಳನ್ನು ಕಲಿತುಕೊಳ್ಳಲು ವೇದಿಕೆ ಮಾಡಿಕೊಟ್ಟಂತವರು.ಸಾರ್ವಜನಿಕ ಬದುಕಿನಲ್ಲಿ ತಾಳ್ಮೆ ಮತ್ತು ತ್ಯಾಗದ ಮಹತ್ವವನ್ನು ಹೇಳಿಕೊಟ್ಟಂತವರು.

 ಸಮಾಜವಾದದ ಮೇರು ಶಿಖರ ಶಾಂತವೇರಿ ಗೋಪಾಲಗೌಡರ ಅಕ್ಕನ ಮಗನಾಗಿದ್ದ ಎ.ಪಿ ರಾಮಪ್ಪನವರ ಅಪಾರ ಶಿಷ್ಯ ಜಗತ್ತಿನಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರು ಇದ್ದಾರೆ.ಸದಾ ಇವರನ್ನು ನೆನಪು ಮಾಡಿ ಕೊಳ್ಳುವಂತವರಿದ್ದಾರೆ.ಪ್ರತಿಯೊಂದು ಹೆಜ್ಜೆ ಇಡುವಾಗಲೂ ಹತ್ತಾರು ಬಾರಿ ಯೋಚಿಸಿ ಹೆಜ್ಜೆ ಇಡುತ್ತಿದ್ದ ರಾಮಪ್ಪನವರಲ್ಲಿ ಸಜ್ಜನಿಕೆ ,ವಿವೇಕ ಮತ್ತು ಮಾನವೀಯ ಕಳಕಳಿ ತುಂಬಿ ತುಳುಕುತ್ತಿತ್ತು.

ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ,ಪ್ರತಿಷ್ಟಿತ ಅನಂತಮೂರ್ತಿ ಪ್ರೌಢ ಶಾಲೆಯ ಉಪ ಪ್ರಾರ್ಯರಾಗಿ,ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಮನೆ ಪಾಠ ಮಾಡುವುದರ ಮೂಲಕ ಜನ ಜನಿತರಾಗಿದ್ದಂತವರು.

ಮನಸ್ಸು ಮಾಡಿದ್ದಿದ್ದರೆ ಶಾಸಕರಾಗುವ ಎಲ್ಲ ಅವಕಾಶಗಳಿದ್ದವು. ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದರು.ಸಂಕೋಚ ಪ್ರವೃತ್ತಿಯು ಕೂಡಾ ಇವರು ಅಧಿಕಾರಗಳಿಂದ ವಂಚಿತರಾಗಲು ಕಾರಣವಾಯಿತು. ತಾಲೂಕು ಜನತಾದಳದ ಅದ್ಯಕ್ಷರಾಗಿ ನೇಮಕಗೊಂಡಿದ್ದಾಗ ಪಕ್ಷ ಸಂಪೂರ್ಣ ನೆಲಕಚ್ಚಿತ್ತು.ಅಂತಹ ಪಕ್ಷವನ್ನು   ಮತ್ತೆ ಮುನ್ನೆಲೆಗೆ ತರುವಲ್ಲಿ ಇವರು ವಹಿಸಿದ ಶ್ರಮ ಐತಿಹಾಸಿಕವಾದುದು.ಆ ಸಂದರ್ಭವನ್ನು ನೆನಪಿಸಿಕೊಂಡರೆ ಮೈ ಜುಮ್ಮೆನ್ನದೆ ಇರಲಾರದು.

ತಮ್ಮ ಜೀವಿತಾವಧಿಯ ಕಡೆಯವರೆಗೂ ತಮ್ಮ ಸೋದರ  ಮಾವ  ಗೋಪಾಲಗೌಡರು ತೋರಿಸಿದ್ದ ದಾರಿಯಲ್ಲೆ ನಡೆಯುವ ಮೂಲಕ ಆದರ್ಶಪ್ರಾಯರಾದಂತವರು.

ತೀರ್ಥಹಳ್ಳಿಯಲ್ಲಿ ಮಲೆನಾಡು ಪ್ರಾಂತ್ಯ ಹೋರಾಟ ಸಮಿತಿಯ ಮೂಲಕ ಹತ್ತು ಹಲವಾರು ಹೋರಾಟಗಳನ್ನು ಹಮ್ಮಿಕೊಂಡು ಯುವಕರನ್ನು ಹುರಿದುಂಬಿಸಿದಂತವರು.ಇವರ ಜೊತೆಗಿನ ಹೋರಾಟಗಳ ಮೆಲುಕು ಹಾಕವುದೆಂಬುದು ಖುಷಿಯ ವಿಚಾರವೆ ಸರಿ.

ರಾಮಪ್ಪ ಮಾಸ್ಟರ್ ಇಲ್ಲದ ತೀರ್ಥಹಳ್ಲಿಯಲ್ಲಿ ಒಂದು ರೀತಿಯ ಸೂತಕದ ಛಾಯೆ ಅವರಿಸಿದೆ.ಮೌಲ್ಯಾಧಾರಿತ ಸಾರ್ವಜನಿಕ ಬದುಕು ತನ್ನ ಒಂದೊಂದೇ ಕೊಂಡಿಗಳನ್ನು ಕಳಚಿಕೊಳ್ಳುತ್ತಾ ಹೋಗುತ್ತಿರುವುದು ಅತ್ಯಂತ ನೋವಿನ ಸಂಗತಿ.ಭಾವಪೂರ್ಣ ಶ್ರದ್ದಾಂಜಲಿಗಳು ಸರ್.

- ನೆಂಪೆ ದೇವರಾಜ್

Search