ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಮ್ಮ ನೆರವಿನಿಂದಾಗಿ ಸುದ್ದಿಯಾಗಿದ್ದಾರೆ.

Social Program Education

Posted on 22-03-2025 |

Share: Facebook | X | Whatsapp | Instagram


ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಮ್ಮ  ನೆರವಿನಿಂದಾಗಿ ಸುದ್ದಿಯಾಗಿದ್ದಾರೆ.

ಆನೆ ನಡೆದದ್ದೇ ಹಾದಿ ಎಂಬಂತೆ ಈಶ್ವರಪ್ಪ ಕೆಲಸಗಳನ್ನು ಮಾಡುವಾಗ ಹಿಂತಿರುಗಿ ನೋಡಿದ್ದು ಬಹಳ ಕಡಿಮೆ. ಮತ ಬ್ಯಾಂಕ್ ಎಂಬ ಕಾರಣಕ್ಕೋ ಅಥವಾ ಧರ್ಮದ ಕಾರಣಕ್ಕೊ ತಾವು ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪವನ್ನು ವಿನೋಬನಗರದಲ್ಲಿ ಕಟ್ಟಿದರು. ಅದಕ್ಕೆ ಶುಭ ಮಂಗಳ ವೆಂದು ಹೆಸರಿಟ್ಟು ಅಲ್ಲಿ ಒಂದು ಗಣಪತಿ ಗುಡಿ ಹಾಗೂ ಶ್ರೀ ಶನೇಶ್ವರ ದೇವರ ದೇವಸ್ಥಾನವನ್ನು ಕಟ್ಟಿದರು. ಅರ್ಚಕರಾಗಿ ಯಾರನ್ನು ನೇಮಿಸಬೇಕೆಂದು ಯೋಚಿಸಿ ದಿವಂಗತ ಅ.ಪ.ರಾಮಭಟ್ಟರನ್ನು ಕೇಳಿದರು. 

     ರಾಮ ಭಟ್ಟರು ಶಿವಮೊಗ್ಗದ ಸಾಂಸ್ಕೃತಿಕ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಹೆಸರು. ಗಣಪತಿ ದೇವಸ್ಥಾನದ ಅರ್ಚಕರಾಗಿದ್ದು ಮೂಲತ ತೀರ್ಥಹಳ್ಳಿಯ ಅಂಬುತೀರ್ಥದವರಾದ ಇವರು ಜಾತಿ ಮತ ನೋಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ರವೀಂದ್ರ ನಗರ ಗಣಪತಿ ದೇವಸ್ಥಾನ ವನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿಸಿಕೊಂಡು ಯಕ್ಷಗಾನ ಸಂಗೀತ ಭಜನಾ ಮಂಡಳಿ ಮತ್ತಿತರ ಸಂಸ್ಕೃತಿಯನ್ನು ಬೆಳೆಸಿದರು.ಅಬ್ರಾಹ್ಮಣನಾದ ಎಡಪಂಥೀಯ ವಿಚಾರಧಾರೆ ಹೊಂದಿದ ನಾನು ಕೂಡ ಇವರ ಗುಂಪಿನಲ್ಲಿ ಸೇರಿಕೊಂಡೆ, ಒಂದು ದಿನವೂ ಕೂಡ ನನಗೆ ಇಲ್ಲಿ ಜಾತಿಯತೆಯ ಸೋಂಕು ತಗಲಲಿಲ್ಲ, 

ಅ.ಪ.ರಾಮಭಟ್ಟರನ್ನು ಕಳೆದುಕೊಂಡ ಮೇಲೆ ನಾನು ರವೀಂದ್ರನಗರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುವುದನ್ನು ಕಡಿಮೆ ಮಾಡಿದ್ದೆ,  ರಾಮ ಭಟ್ಟರ ಮಗ ಶಂಕರ ಭಟ್ಟರು ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋದರು ಕೂಡ ನನಗೆ ಅಲ್ಲಿ ಹೋದಾಗ ನೋಡಲು ರಾಮ ಭಟ್ಟರು ಸಿಗುವುದಿಲ್ಲ ಎಂಬ ಬೇಸರ ಕಾಡುತ್ತಿತ್ತು.ಈ ನಡುವೆ ಅಲ್ಲಿ ನಡೆಯುವ ಅನೇಕ ಚಟುವಟಿಕೆಗಳು ವಿನೋಬ ನಗರದ ಶನೇಶ್ವರ ದೇವಸ್ಥಾನದಲ್ಲಿ ನಡೆಯತೊಡಗಿತು. ಅದಕ್ಕೆ ಕಾರಣ ಈಶ್ವರಪ್ಪ ಉತ್ತಮ ಅರ್ಚಕನನ್ನು ರಾಮ ಭಟ್ಟರಲ್ಲಿ ಕೇಳಿದ್ದು. ಆಗ ರಾಮಭಟ್ಟರು ತಮ್ಮಲ್ಲಿ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದ ವಿನಾಯಕ ಬಾಯರ್ ಎಂಬ ತರುಣ ಅರ್ಚಕನನ್ನು ಕಳುಹಿಸಿಕೊಟ್ಟರು.

     ಈ ವಿನಾಯಕ ಮೂಲತ ಕೋಟ ಮೂಲದವರು. ಅವರ ಮಾವ ಹೊಸನಗರದ ಕಾರಗಡಿಯಲ್ಲಿ ವಾಸವಾಗಿದ್ದರಿಂದ ಅಲ್ಲಿಗೆ ಬಂದು ವಿದ್ಯಾಭ್ಯಾಸಕ್ಕೆ ಸೇರಿದ್ದರು. ನಾನು ಕೂಡ ನನ್ನ ಹುಟ್ಟೂರಿನಲ್ಲಿ ಪಾಠ ಮಾಡಬೇಕೆಂದು ಮೂರು ವರ್ಷಗಳ ಕಾಲ ಹೊಸನಗರದ ಪದವಿ ಪೂರ್ವ ಕಾಲೇಜು ಡಿಗ್ರಿ ಕಾಲೇಜು ಮತ್ತು ಹೈ ಸ್ಕೂಲ್ ನಲ್ಲಿ ಉಚಿತವಾಗಿ ತರಗತಿ ತೆಗೆದುಕೊಂಡಿದ್ದೆ. ಆಗ ವಿನಾಯಕ ನನ್ನ ವಿದ್ಯಾರ್ಥಿಯಾಗಿದ್ದ. ಮುಂದೆ ನಾನು ಡಿವಿಎಸ್‌ ಕಾಲೇಜಿಗೆ  ಖಾಯಂ ಉಪನ್ಯಾಸಕನಾಗಿ ಬಂದು ಸೇರಿಕೊಂಡ ಕೆಲವು ದಿನಗಳ ನಂತರ ವಿನಾಯಕ ಬಾಯರ್ 

ಡಿ.ವಿ.ಎಸ್. ಸಂಜೆ ಕಾಲೇಜಿಗೆ ಸೇರಿಕೊಂಡ. ಗಾಂಧಿನಗರದಲ್ಲಿ ಪೂಜೆ ಸಾಮಾನುಗಳು ಸಿಗುವ ಅಂಗಡಿಯನ್ನು ನಡೆಸಿದ.

ಮೂರು ವರ್ಷಗಳ ಕಾಲ ನಿಷ್ಠೆಯಿಂದ ಪಾಠ ಕೇಳಿದ ಈ ಅವಧಿಯಲ್ಲಿ ಸುಮಾರು ಬ್ರಾಹ್ಮಣ ವಟುಗಳು ನನ್ನ ಶಿಷ್ಯರಾಗಿದ್ದರು ಅವರು ಬೆಳಿಗ್ಗೆ ಉದರ ನಿಮಿತ್ತ ಎಂದು ಪೂಜೆ ಪುನಸ್ಕಾರಗಳಿಗೆ ವೇದ ಕಲಿಯಲು ಮಂತ್ರ ಕಲಿಯಲು ಹೋಗುತ್ತಿದ್ದರು. ಅವರಲ್ಲಿ ಲಕ್ಷ್ಮೀಶ ಆಡಿಗ, ಪ್ರಸನ್ನ, ವಿನಾಯಕ ಮುಂತಾದವರು ಬೇರೆ ಬೇರೆ ವರ್ಷಗಳಲ್ಲಿ  ನನಗೆ ಹತ್ತಿರವಾದರು. ಲಕ್ಷ್ಮ್ಮೀಶ ಅಡಿಗ

ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದ ನನಗೆ ರಾಮಭಟ್ಟರ ಪರಿಚಯ ಮಾಡಿಕೊಟ್ಟ, ಅದೇ ಸಮಯದಲ್ಲಿ ಈಗಿನ ನಮ್ಮ ಯಕ್ಷಗುರು ಪರಮೇಶ್ವರ ಹೆಗಡೆ ತಿಂಗಳಲ್ಲಿ ಕೆಲವು ದಿನಗಳ ಕಾಲ ಬಂದು ಭಾಗವತಿಕೆ ಕಲಿಸುತ್ತಿದ್ದರು. ನಾನು ಹಂದಲಸು ಲಕ್ಷ್ಮಿ ನಾರಾಯಣ ಭಟ್ಟರು. ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಈಗ ಸನ್ಯಾಸಿ ಗಳಾಗಿರುವ ಆಗ ಆಯುರ್ವೇದ ವೈದ್ಯರಾಗಿದ್ದ ಸಂತೋಷ್ ಕುಮಾರ್ ಶೆಟ್ಟರು ಕೊನೆಯಲ್ಲಿ ಉಳಿದುಕೊಂಡು. ಅರ್ಧಂಬರ್ಧ ಕಲ್ತು ಅರ್ಧಕ್ಕೆ ಬಿಟ್ಟೆವು. ಆದರೆ ಹಂದಲಸು ನನ್ನನ್ನು ಅವರ ಕೋಟೆ ತಾಳಮದ್ದಳೆ ಮೇಳಕ್ಕೆ ಸೇರಿಸಿಕೊಂಡರು. 

ಹಂದಲಸು ನಿಧನದ ನಂತರ ಪುನ ಯಕ್ಷಗಾನ ತಂಡಕ್ಕೆ ಬಂದು ನಿಂತೆ.ಅಲ್ಲಿ ಸುದರ್ಶನ ಭಟ್ ಒಳ್ಳೆಯ ಸ್ನೇಹಿತರಾದರು.

ವಿನಾಯಕ ಬಾಯರ್ ಶನೇಶ್ವರ ದೇವಸ್ಥಾನಕ್ಕೆ ಹೊಸ ಕಳೆಯನ್ನು ತಂದ, ಈ ನಡುವೆ ಶಿವಮೊಗ್ಗದಲ್ಲಿ ಅಣಬೆಯಂತೆ ಬೆಳೆದಿದ್ದ 150ಕ್ಕೂ ಹೆಚ್ಚು ಇದ್ದ ಭಜನೆ ಮಂಡಳಿಗಳು ರಾಮ ಭಟ್ಟರ ಆಶ್ರಯದಲ್ಲಿ ಬೆಳೆಯುತ್ತಲೇ

ಇದ್ದವು. ನಮ್ಮ ಪಂಪನಗರ ವಿಜಯನಗರದ ಶ್ರೀರಾಮ ಮತ್ತು  ಶ್ರೀ ಶಾರದ ಭಜನಾ ಮಂಡಳಿ ಅತ್ಯಂತ ಉತ್ತಮವಾಗಿ ಭಜನೆಯನ್ನು ಹಾಡುತ್ತದೆ ಎಂದು ರಾಮಭಟ್ಟರು ಹೇಳಿದ್ದರು. ನನ್ನ ಮತ್ತೊಬ್ಬ ವಿದ್ಯಾರ್ಥಿಯಾದ ಶಬರೀಶ್ ಕಣ್ಣನ್ ಈ ಭಜನಾ ಮಂಡಳಿಯ ಸಂಘಟನಾ ಕಾರ್ಯದಲ್ಲಿ ತೊಡಗಿ ರಾಮ ಭಟ್ಟರಲ್ಲಿ ಅನ್ಯೋನ್ಯತೆಯಿಂದ ನಂತರ ವಿನಾಯಕ ಬಾಯರ್ ಅಧ್ಯಕ್ಷತೆಯಲ್ಲಿ ಅತ್ಯಂತ ಹುರುಪಿನಿಂದ ಭಜನೆಯನ್ನು ಮುನ್ನಡೆಸುತ್ತಿದ್ದ. ಪ್ರತಿ ವರ್ಷ ನವರಾತ್ರಿಯಲ್ಲಿ ಭಜನೆ ಯಕ್ಷಗಾನ ತಾಳಮದ್ದಳೆ ಸ್ನೇಹಿತ ನಟೇಶ್ ರವರ ಮಂಕುತಿಮ್ಮನ ಕಗ್ಗ ಮತ್ತು ಬದುಕಿನ ಮೌಲ್ಯಗಳ ಮಾತುಗಳಿಗೆ ಪ್ರೋತ್ಸಾಹ ನೀಡಿ ಶನೇಶ್ವರ ದೇವಸ್ಥಾನವನ್ನು  ಮೌಲ್ಯಗಳ ಕೇಂದ್ರವನ್ನಾಗಿ ವಿನಾಯಕ ಮಾಡಿದ್ದರು. ಮತ್ತು ಅ.ನ. ವಿಜೇಂದ್ರರ ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

2025 ಫೆಬ್ರವರಿ ತಿಂಗಳ 16ರ ಭಾನುವಾರ ನಮ್ಮ ಅಣ್ಣನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ಗಣ ಹೋಮ ಮಾಮೂಲಿನಂತೆ ವಿನಾಯಕನಿಗೆ ಫೋನ್ ಮಾಡಿದೆ. ಖಂಡಿತ ಸರ್ ಬಂದು ಮಾಡಿಕೊಡುತ್ತೇನೆ ಎಂದ. 15ರ ಶನಿವಾರ ಮತ್ತೊಮ್ಮೆ ಜ್ಞಾಪಿಸಲೆಂದು ಫೋನ್ ಮಾಡಿದೆ ನಾನು ಪ್ರಯಾಗ್ ರಾಜ್ ನಲ್ಲಿ ಇದ್ದೇನೆ ಎಂದ. ನಾನು ಸಿಟ್ಟಿಗೆಳುವ ಮುನ್ನವೇ ನಿಮ್ಮ ಮನೆಗೆ ಬೇಕಾದ ಪೂಜೆಯ ವ್ಯವಸ್ಥೆ ಮಾಡಿದ್ದೇನೆ ಇಬ್ಬರು ಬರುತ್ತಾರೆ ಅಂದ, ನೀನು ಎಂದೆ ಭಾನುವಾರ ಬೆಳಿಗ್ಗೆ ಶಿವಮೊಗ್ಗ ಬರುತ್ತೇನೆ  ಎಂದ ಪೂಜೆ ಸಾಂಗವಾಗಿ ನೆರವೇರಿತು ನಾನು ಗಡಿಬಿಡಿಯಲ್ಲಿ ವಿನಾಯಕನನ್ನು ಮರೆತೆ ಸೋಮವಾರ ಬೆಳಿಗ್ಗೆ ಪೂಜಾ ಸಾಮಗ್ರಿಗಳನ್ನು ಕೊಟ್ಟು ಬರೋಣ ವೆಂದು ಶನೇಶ್ವರದ ದೇವಸ್ಥಾನದ  ಪಕ್ಕದ ಮನೆಗೆ ಹೋದಾಗ ಕೂಡಲೇ ಹೊರಗೆ ಬಂದರು.

ಬಂದವರೇ ನಮಸ್ಕಾರ, ಸ್ಸಾರಿ ಸರ್ ಬರುವಾಗ ಸ್ವಲ್ಪ ತಡವಾಯಿತು ಪೂಜೆ ಚೆನ್ನಾಗಿ ಆಯಿತ ಎಂದು ಕೇಳಿದರು. ಹೂ ಪ್ರವಾಸ ಹೇಗಿತ್ತು ಎಂದೆ. ನಾನು ಹಿಮಾಲಯ ಬೈಕ್ನಲ್ಲಿ ಹೋಗಿದ್ದೆ ಸರ್ ಎಂದು ಹಿಮಾಲಯನ್ ಬೈಕನ್ನು ತೋರಿಸಿದರು. ಎಷ್ಟು 100 ಕಿಲೋಮೀಟರ್ ಸ್ಪೀಡಲ್ಲಿ ಹೋಗಿದ್ದೆಯ ಎಂದೆ  ಹೂ ಸಾರ್ 160 ರಿಂದ 180ರ ವರೆಗೆ ಹೋಗುತ್ತಿದ್ದೆ. ಪ್ರತಿ 60 ಕಿಲೋಮೀಟರ್ ಗೆ ನಿಲ್ಲಿಸಿಕೊಂಡು ಹಿಂದುಗಡೆ ಬರುತ್ತಿರುವವರನ್ನು ಕಂಡು ಮುಂದುವರೆಯುತ್ತಿದ್ದೆ. ಎರಡುವರೆ ದಿನಕ್ಕೆ ನಾನು ಶಿವಮೊಗ್ಗದಿಂದ ಪ್ರಯಾಗರಾಜ್ ತಲುಪಿದೆ. ನೀವೆಲ್ಲಾ ಹೇಳುವಷ್ಟು ಕುಂಭಮೇಳ ಕೆಟ್ಟದಾಗಿಲ್ಲ ಸರ್. ಜನ ಸ್ವಲ್ಪ ಜಾಸ್ತಿ ಇದ್ದಾರೆ ಕನಿಷ್ಠ 10 ಕಿ.ಮೀ ನಡೆಯಲೇಬೇಕು. ಆದರೆ ದಾರಿ ಉದ್ದಕ್ಕೂ ತಿಂಡಿ ತಿನಿಸು ಊಟ ಗಳು 24 ಗಂಟೆಯೂ ದೊರೆಯುತ್ತಿತ್ತು. ಹಣವಿಲ್ಲದಿದ್ದರೆ ಉಚಿತವಾಗಿಯು ಕೊಡುತ್ತಿದ್ದರು ಎಂದ, ಆತನ  ಸಾಹಸ ಮೆಚ್ಚಿದೆ, ನಾನು ಈಗಾಗಲೇ 4ಬಾರಿ ಹಿಮಾಲಯಕ್ಕೆ ಹೋಗಿ ಬಂದಿದ್ದೇನೆ, ಶಿಷ್ಯ ಅದೇ ಕೆಲಸ ಮಾಡಿದ್ದಾನೆ, ಸರಿ ಎಂದು ಹೇಳಿ ಶನಿವಾರ ಮತ್ತು ಭಾನುವಾರ ರಂಗಮಂದಿರದಲ್ಲಿ ಯಕ್ಷಗಾನವನ್ನು ಮುಗಿಸಿಕೊಂಡು ಬೆಳಿಗ್ಗೆ 5. 15ಕ್ಕೆ ಟ್ರೈನ್ ಹತ್ತಿ ಬೆಂಗಳೂರಿಗೆ ಬಂದೆ. ಬಂದ ಮೂರನೇ ದಿನಕ್ಕೆ ಬರಸಿಡಿಲು ಬಡಿದಂತ ವಾರ್ತೆ ಕಿವಿಗೆ ಬಿತ್ತು .ಹೌದು ವಿನಾಯಕ ನಮ್ಮ ತೊರೆದಿದ್ದ. 

ಮಾರ್ಚ್ 14  ಶುಭ ಮಂಗಳ ಸಭಾಭವನದಲ್ಲಿ ಆತನ ಶ್ರದ್ಧಾಂಜಲಿ ಕಾರ್ಯಕ್ರಮ. ಭಜನಾ ಮಂಡಳಿಯ ಸದಸ್ಯರುಗಳು ರಾಗವಾಗಿ ವಿಷ್ಣು ಸಹಸ್ರನಾಮವನ್ನು ಪಠಿಸಿ ನಂತರ ಕಾರ್ಯಕ್ರಮ ಪ್ರಾರಂಭವಾಯಿತು. ನಾನು ಶಬರೀಶನನ್ನು ಕರೆದು ವಿನಾಯಕ ನನ್ನ ವಿದ್ಯಾರ್ಥಿ ಅವರ ಬಗ್ಗೆ ಮಾತನಾಡಬೇಕು ಎಂದೆ. ಸರ್ ನಾವು ಪಟ್ಟಿ ಮಾಡಿಕೊಂಡಿದ್ದೇವೆ. ಅವಕಾಶವಿದ್ದಲ್ಲಿ ನಿಮಗೆ ಕೊಡುತ್ತೇವೆ ಎಂದ.ನನ್ನ ಸ್ನೇಹಿತ ರಾದ ಅಚ್ಯುತ ಅವಧಾನಿ ಅ.ನಾ. ವಿಜೇಂದ್ರ ಜಿ.ಎಸ್. ನಟೇಶ್  ರಂಜನಿ ದತ್ತಾತ್ರಿ ಶುಭಾ ರಾಘವೇಂದ್ರ ಮತ್ತಿತರರು ಮಾತನಾಡಿದರು.

ಸನ್ಮಾನ್ಯ ಕೆಎಸ್ ಈಶ್ವರಪ್ಪ ಭಾವುಕರಾಗಿ ಮಾತನಾಡಿ ಈ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು 

 ನಿಶ್ಚಯಿಸಿ ತಮ್ಮ ಶನೇಶ್ವರ ದೇವಾಲಯದ ಟ್ರಸ್ಟ್ ವತಿಯಿಂದ 10 ಲಕ್ಷ ರೂಪಾಯಿ ನಗದು ಅವರ ಕುಟುಂಬಕ್ಕೆ ನೀಡಿದರು. ಹಾಗೂ ವಿನಾಯಕನ ಮಕ್ಕಳಾದ ಅಮೂಲ್ಯ ಮತ್ತು ಸನ್ನಿಧಿ ಯಾವುದನ್ನೇ ಓದಲಿ ಅವರ ಓದಿನ ಸಂಪೂರ್ಣ ಖರ್ಚನ್ನು ಬರಿಸುತ್ತೇನೆ

ಮತ್ತು ತಮ್ಮ ಹೊಸ ಕಾಲೇಜಿನಲ್ಲಿ ವಿನಾಯಕನ ಪತ್ನಿಗೆ ಕ್ಲರ್ಕ್ ಹುದ್ದೆಯನ್ನು ನೀಡುತ್ತೇನೆ ಎಂದರು. 

ಮನಸ್ಸಿಗೆ ಅತ್ಯಂತ ಹೆಚ್ಚು ಆನಂದವಾಯಿತು ಪ್ರೀತಿ ಸುರಿಸುವ ಬಾಯಿಗಿಂತ ಸಹಾಯ ನೀಡುವ ಕೈಗಳೇ ಲೇಸು ಎಂದು ಅರಿವಾಯಿತು. ನಾನೇ ಅನೇಕ ಬಾರಿ ಪತ್ರಿಕೆಯಲ್ಲಿ ಈಶ್ವರಪ್ಪನವರ ಬಾಯಿ ಸರಿ ಇಲ್ಲ ಎಂದು ಹೇಳಿದ್ದೆ, ಆದರೆ ಅವರ ಕೈ ಸರಿ ಇದೆ ಎಂದು ಮನಸು ಬಿಚ್ಚಿ ಹೇಳಲು ಸಂತೋಷವಾಗುತ್ತದೆ. 

ಜಾತಿ ರಾಜಕಾರಣಿಗಳಿಗೆ ಹೋಲಿಸಿದರೆ ಈಶ್ವರಪ್ಪ ಅತ್ಯಂತ ಎತ್ತರವಾದ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾಗಿ ವಿ.ರಾಜುರವರು ಕಾರ್ಯದರ್ಶಿಯಾಗಿ ಸ.ನಾ.ಮೂರ್ತಿಯವರು ಇದ್ದರೂ ಕೂಡ ವಿನಾಯಕ ಬಾಯರ್ ಅಂತ ಅರ್ಚಕರು ಮಾಡುವ ಎಲ್ಲಾ ಕೆಲಸಗಳಿಗೆ ಟ್ರಸ್ಟ್ ಸಂಪೂರ್ಣ ಸಹಕಾರ ನೀಡಿತ್ತು ಎನ್ನುವುದು ಮೆಚ್ಚುವಂತಹ ವಿಷಯ. ಸಿದ್ದಾಂತ ಏನೇ ಇರಲಿ ಈಶ್ವರಪ್ಪನವರಂತ ರಾಜಕಾರಣಿಗಳು ಎಂದಿಗೂ ಅಗತ್ಯ ಹಿಂದುಳಿದ ವರ್ಗದವರಾಗಿದ್ಜರು ಮೇಲ್ಜಾತಿಯ ವಿರೋಧಿಗಳಲ್ಲ,

ಶ್ರದ್ಧಾಂಜಲಿ ಭಾಷಣ ಎಲ್ಲರದು ಮುಗಿಯಿತು. ನಿರ್ವಹಣೆ ಮಾಡುತ್ತಿದ್ದವರು ಕರ್ನಾಟಕ ಸಂಘದ  ಕಾರ್ಯದರ್ಶಿ ವಿನಯ್.  ನನ್ನ ಹೆಸರು ಕೊಟ್ಟರು ಶ್ರದ್ಧಾಂಜಲಿ ನುಡಿಗೆ ಕರೆಯಲಿಲ್ಲ, ಪಾಪ ಅವರಿಗೆ ಎರಡು ನಿಮಿಷ ಸಮಯ ಇರಲಿಲ್ಲ. ಅವರಿಗೆ ಗುರು ಶಿಷ್ಯರ ಸಂಬಂಧ ಗುರುತಿಸುವ ಸಂಸ್ಕಾರ ಇರಲಿಲ್ಲ.

ಇರಲಿ ದಿವಂಗತ ಶಿಷ್ಯನ ಉದಾತ್ತವಾದ ನನ್ನ ಹೃದಯದಲ್ಲಿದೆ.

ಡಾ.ಕೆ.ಜಿ. ವೆಂಕಟೇಶ್  ಕ್ರಾಂತಿಕಿಡಿ

Search